Home » ಐವನ್‌ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ
 

ಐವನ್‌ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ

by Kundapur Xpress
Spread the love

ಬೆಂಗಳೂರು : ಬಾಂಗ್ಲಾ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗುತ್ತೇವೆ ಎಂದು ವಿವಾದಿತ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರಿಗೆ ದೇಶದ್ರೋಹಿ ಪಟ್ಟ ಕಟ್ಟಿ ವಿಧಾನ ಪರಿಷತ್ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಬಿಜೆಪಿ ಆಗ್ರಹಿಸಿದ್ದು, ಡಿಸೋಜ ವಿರುದ್ಧ ಗೂಂಡಾ ಕಾಯ್ದೆ ಅನ್ವಯ ದೂರು ದಾಖಲಿಸಬೇಕೆಂದು ಡಿಜಿಗೆ ದೂರು ಸಲ್ಲಿಸಿದೆ.

ಈ ಕುರಿತು ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡರು, ಐವನ್ ಡಿಸೋಜಗೆ ಪಾಕಿಸ್ತಾನದ ನಂಟಿದೆ. ಅವರ ವಿರುದ್ಧ ದೇಶ ವಿರೋಧಿ ಎಂಬ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸಂಸದ ಗೋವಿಂದ ಕಾರಜೋಳ ಮಾತನಾಡಿ, ಮುಖ್ಯಮಂತ್ರಿ ಮೇಲೆ ಆರೋಪ ಬಂದಾಗ ಅವರನ್ನು ಅಪರಾಧಿ ಎನ್ನುವುದಿಲ್ಲ. ನಿರಪರಾಧಿ ಎಂದು ಸಾಬೀತುಪಡಿಸುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯಪಾಲರಿಗೆ ಅವಮಾನ ಮಾಡುವಂತೆ ನಡೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು. ಪ್ರತಿಭಟನೆ ನಡೆಸುವ ವೇಳೆ ರಾಜ್ಯಪಾಲರ ಫೋಟೊಗೆ ಚಪ್ಪಲಿಯಿಂದ ಹೊಡೆದುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ರಾಜ್ಯಪಾಲರಿಗೆ ಧಮ್ಮಿ ಹಾಕುವ ರೀತಿ ಮಾತನಾಡಿದ್ದಾರೆ. ಬಾಂಗ್ಲಾದ ಪರಿಸ್ಥಿತಿ ಕರ್ನಾಟಕದಲ್ಲೂ ಬರಲಿದೆ ರಾಜಭವನಕ್ಕೆ ನುಗ್ಗಿ ರಾಜ್ಯ ಪಾಲರನ್ನು ಓಡಿಸುವುದಾಗಿ ತಿಳಿಸಿದ್ದು, ಐವಾನ್ ಡಿಸೋಜರಿಗೆ ಪಾಕ್ ಉಗ್ರರ ನಂಟಿದೆಯೇ ಎಂಬ ಸಂಶಯ ಬರುತ್ತಿದೆ. ಅವರ ಹೇಳಿಕೆ ಖಂಡನೀಯ ಎಂದರು. ವಿ.ಪ.ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಐವನ್ ಡಿಸೋಜ ಹೇಳಿಕೆ ಬಗ್ಗೆ ಗಮನ ಸೆಳೆದಿದ್ದೇವೆ. ಜಮೀರ್ ಅಹ್ಮದ್ ಹೇಳಿಕೆಯನ್ನೂ ಪ್ರಸ್ತಾಪಿಸಿದ್ದೇವೆ. ಕೃಷ್ಣಬೈರೇಗೌಡರು ಸೇರಿ ಕಾಂಗ್ರೆಸ್ಸಿನ ಅನೇಕ ಪ್ರಮುಖರ ನಿಂದನಾ ಟೀಕೆಗಳ ಕುರಿತು ವಿವರಿಸಿದ್ದಾಗಿ ಹೇಳಿದರು. ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್, ಶಾಸಕ ಅವಿನಾಶ್ ಜಾಧವ್ ಇದ್ದರು.

   

Related Articles

error: Content is protected !!