ಕುಂದಾಪುರ : ಕರ್ಕುಂಜೆ ಸಹಕಾರಿ ವ್ಯಾವಸಾಯಿಕ ಸಂಘವು ಈಗ ಸ್ವಂತ ಕಟ್ಟಡವನ್ನು ಹೊಂದಿದ್ದು, ಇದರೊಂದಿಗೆ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳು ಸ್ವಂತ ಕಟ್ಟಡವನ್ನು ಹೊಂದಿದಂತಾಗಿದೆ. ಕರ್ಕುಂಜೆ ಸಹಕಾರಿ ವ್ಯಾವಸಾಯಿಕ ಸಂಘವು ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದ್ದು ಉಡುಪಿ ಜಲ್ಲೆಗೆ ಮಾದರಿ ಸಹಕಾರಿ ಸಂಘವಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.ಶನಿವಾರ ಕರ್ಕುಂಜೆ ಸಹಕಾರಿ ವ್ಯಾವಸಾಯಿಕ ಸಂಘದ ನೂತನ ಕಟ್ಟಡ ‘ಬಾಂಡ್ಯ ಶ್ರೀ ಕೆ. ಸುಧಾಕರ ಶೆಟ್ಟಿ ಸಹಕಾರಿ ಸದನ’ವನ್ನು ಅವರು ಉದ್ಘಾಟಿಸಿ, ಸಮ್ಮಾನ ಸ್ವೀಕರಿಸಿ ಮಾತನಾಡಿದರು.ಕರ್ಕುಂಜೆ ಸಹಕಾರಿಯು 25 ವರ್ಷ ಪೂರೈಸುತ್ತಿದ್ದಂತೆಯೇ ಜಿಲ್ಲೆಗೆ ಮಾದರಿ ಯಾದಂತಹ ಕಟ್ಟಡವೂ ನಿರ್ಮಿಸಿದೆ. ಬ್ಯಾಂಕಿಂಗ್, ಆಡಳಿತ ಕಚೇರಿ, ಸದಸ್ಯರ ಶುಭ ಸಮಾರಂಭಗಳಿಗೆ ಅನುಕೂಲವಾದಂತಹ ಹಾಲ್, ಹವಾನಿಯಂತ್ರಿತ ವ್ಯವಸ್ಥೆ ಲಿಫ್ಟ್ ಸೌಲಭ್ಯ ಎಲ್ಲವೂ ಇವೆ. ಅಧ್ಯಕ್ಷರಾದ ಸುಧಾಕರ ಶೆಟ್ಟರು ಈ ಸಂಘಕ್ಕೆ ಹೊಸ ಮೆರುಗು ತಂದಿದ್ದಾರೆ ಎಂದ ಅವರು, ಡಿಸಿಸಿ ಬ್ಯಾಂಕ್ ವತಿ ಯಿಂದ ಸಂಘಕ್ಕೆ 15 ಲಕ್ಷ ರೂ. ನೆರವು ಘೋಷಿಸಿದರು.ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಭಾಭವನ’ವನ್ನುಉದ್ಘಾಟಿ ಸಿದ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಬೆಳ್ಳಿ ಹಬ್ಬದ ದ್ಯೋತಕವಾಗಿ ಈ ಕಟ್ಟಡ ನಿರ್ಮಾಣಗೊಂಡಿದೆ. ಗ್ರಾಮೀಣ ಭಾಗದ ಮಾದರಿ ಸಂಸ್ಥೆಯಾಗಿ ಸಂಘ ಬೆಳೆದಿದೆ ಎಂದರು.ಬಾಂಡ್ಯ ಸುಧಾಕರ ಶೆಟ್ಟರು ಈ ಕಟ್ಟಡಕ್ಕೆ ತಮ್ಮ ಸ್ಥಳ ನೀಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಈ ಕಟ್ಟಡವು ಸುಸಜ್ಜಿತವಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಪೂರಕ ಎಂದು ಎಂದು ಬ್ಯಾಂಕಿಂಗ್ ವಿಭಾಗವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭದ್ರತಾ ಕೊಠಡಿಯನ್ನು ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಜಯರಾಮ ರೈ ದುರ್ಗಾಪರಮೇಶ್ವರಿ ಭೋಜನ ಭೂಮಿಯನ್ನು ಸಹ ಕಾರಿ ಸಂಘ ಗಳ ಉಪನಿಬಂಧಕಿ ಲಾವಣ್ಯಾ ಕೆ. ಆರ್. ಗೋದಾಮನ್ನು ಉದ್ಘಾಟಿಸಿದರು.ಸಂಘದ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಪ್ರಸ್ತಾವಿಸಿ ಬಹುವರ್ಷಗಳ ನಿರೀಕ್ಷೆ ಈಗ ಈಡೇರಿದೆ. ರಾಜೇಂದ್ರ ಕುಮಾರ್ ಅವರ ಸಹಕಾರದಿಂದ ಸಂಘ ಬೆಳೆದಿದೆ. ಭವಿಷ್ಯದಲ್ಲಿ ವ್ಯವಹಾರ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಭಾಗದ ರೈತರ ಅನುಕೂಲಕ್ಕಾಗಿ ನಬಾರ್ಡ್ನಿಂದ 10 ಕೋ. ರೂ. ಸಾಲದಲ್ಲಿ ಗೋದಾಮು ಕಟ್ಟಡ ರಚನೆಯಾಗಲಿದೆ. ಇದರಲ್ಲಿ ಅಡಿಕೆ, ತೆಂಗು, ತರಕಾರಿ ಮೊದಲಾದ ದಾಸ್ತಾನು ಮಾಡಬಹುದು ಎಂದರು.ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯಾ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಎಚ್. ಹರಿ ಪ್ರಸಾದ್ ಶೆಟ್ಟಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ದ.ಕ. ಜಿ. ಹಾ.ಉ. ಒಕ್ಕೂಟದ ಮಾಜಿ ನಿರ್ದೇಶಕ ಕೆ. ಬಾಂಡ್ಯ ಸುಬ್ಬಣ್ಣ ಶೆಟ್ಟಿ ಕರ್ಕುಂಜೆ ಗ್ರಾ.ಪಂ. ಅಧ್ಯಕ್ಷ ಬಿಜೈ ರಾಜೀವ ಶೆಟ್ಟಿ ಆದ್ರೆ ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಗುಲ್ವಾಡಿ ಗ್ರಾ.ಪಂ. ಅಧ್ಯಕ್ಷೆ ಶೋಭಾ ಎಚ್., ಸಂಘದ ಸಿಇಒ ಸುಭಾಶ್ಚಂದ್ರ ಶೆಟ್ಟಿ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.