ಉಡುಪಿ : ಪೊಡವಿಗೊಡೆಯನ ಊರು ಉಡುಪಿ ಅಷ್ಟಮಿ ಸಂಭ್ರಮಕ್ಕೆ ಸಜ್ಜಾಗಿದೆ ಉಡುಪಿ ನಗರದ ಕೃಷ್ಣ ಮಠ, ರಥಬೀದಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ವಿಟ್ಲಪಿಂಡಿಯ ಲೀಲೋತ್ಸವಕ್ಕೆ ವೇದಿಕೆ ಸಿದ್ದಗೊಳ್ಳುತ್ತಿದೆ.
ಕೃಷ್ಣಮಠದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 27ರಂದು ಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ನಡೆಯಲಿದ್ದು ಮೊಸರು ಕುಡಿಕೆ ಉತ್ಸವಕ್ಕೆ ರಥಬೀದಿಯಲ್ಲಿ ತ್ರಿಕೋನಾಕೃತಿಯ ಗುರ್ಜಿಗಳನ್ನು ಅಳವಡಿಸಲಾಗುತ್ತಿದೆ.
ರಥಬೀದಿಯ ಸುತ್ತಲೂ 13 ಮರದ ತ್ರಿಕೋನಾಕೃತಿಯ ಗುರ್ಜಿಗಳನ್ನುನಿರ್ಮಿಸಲಾಗಿದೆ. ಕಾರ್ಮಿಕರು ಕಳೆದ ಮೂರ್ನಾಲ್ಕು ದಿನಗಳಿಂದ ರಥಬೀದಿ ಸುತ್ತಲೂ ಗುರ್ಜಿ ಅಳವಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಮಂಟಪ ಗುರ್ಜಿಗಳು
ವ್ಯಾಸರಾಜ ಮಠದ ಮುಂಭಾಗ, ಕೃಷ್ಣ ಮಠದ ಮುಂಭಾಗ ಮತ್ತು ಕನಕ ಗೋಪುರದ ಮುಂಭಾಗ ಎರಡು ದಿಕ್ಕಿನಲ್ಲಿ ಬೃಹತ್ ಮಂಟಪದ ಗುರ್ಜಿ ನಿರ್ಮಿಸಲಾಗಿದೆ. ಉಳಿದಂತೆ ಅಷ್ಟಮಠಕ್ಕೆ ಸಂಬಂಧಿಸಿದ 8. ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ 2 ಗುರ್ಜಿಗಳು, 2 ಮಂಟಪ ಗುರ್ಜಿಗಳು ಸೇರಿ ಒಟ್ಟು 13 ಗುರ್ಜಿಗಳನ್ನು ರಚಿಸಲಾಗುತ್ತಿದೆ. ಪ್ರತಿ ಗುರ್ಜಿಗಳಲ್ಲಿ ತಲಾ ಮೂರು ಕುಡಿಕೆ ಇರಿಸಲಾಗುತ್ತಿದ್ದು, ಕುಡಿಕೆಗಳಲ್ಲಿ ಮೊಸರು, ಅರಳಿನ ಹುಡಿ, ಅರಿಶಿಣ ಕುಂಕುಮದ ನೀರು ತುಂಬಿಸಲಾಗುತ್ತದೆ. ದೊಡ್ಡ ಮಡಕೆಗಳಲ್ಲಿ ಅರಳಿನ ಹುಡಿ ಮತ್ತು ತೆಂಗಿನ ಕಾಯಿ ಇಡಲಾಗುತ್ತದೆ. ದೊಡ್ಡ ಮಡಿಕೆಗಳನ್ನು ಒಳಗೊಂಡ ಒಟ್ಟು 47 ಮಣ್ಣಿನ ಕುಡಿಕೆಗಳಿಗೆ ಕಲಾತ್ಮಕವಾಗಿ ಬಣ್ಣ ಬಳಿಯಲಾಗಿದೆ
ಅಷ್ಟಮಿಯಂದು ಕೃಷ್ಣ ದೇವರಿಗೆ ಸಮರ್ಪಿಸಲು ಮಡಿಯಲ್ಲಿ ತಯಾರಿಸುವ ಲಡ್ಡಿಗೆ ಇಂದು ಬೆಳಗ್ಗೆ 9.30ಕ್ಕೆ ಭೋಜನ ಶಾಲೆಯಲ್ಲಿ ನಡೆಯಲಿದ್ದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥರು ಚಾಲನೆ ನೀಡಲಿದ್ದಾರೆ.