ಬೆಂಗಳೂರು : ರಾಜಾತಿಥ್ಯದ ಪ್ರಕರಣದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಚಿತ್ರ ದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಅವರ ಒಂಭತ್ತು ಮಂದಿ ಸಹಚರರನ್ನು ಬೇರೆಡೆ ಸ್ಥಳಾಂತರಿಸಲು ಮಂಗಳವಾರ ರಾಜ್ಯ ಬಂದೀಖಾನೆ ಮತ್ತು ಸುಧಾರಣೆ ಸೇವೆ ಇಲಾಖೆ ನ್ಯಾಯಾಲಯದ ಅನುಮತಿ ಪಡೆದಿದೆ.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ದರ್ಶನ್ ಅನ್ನು ಪ್ರತ್ಯೇಕವಾಗಿ ಜೈಲು ಗಳಿಗೆ ಎತ್ತಂಗಡಿ ಮಾಡಲು ಕಾರಾಗೃಹ ಇಲಾಖೆ ಸಿದ್ಧತೆ ನಡೆಸಿದ್ದು, ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್ ಸ್ಥಳಾಂತರವಾಗಲಿದ್ದಾರೆ. ಇನ್ನುಳಿದ ಅವರ ಒಂಭತ್ತು ಸಹಚರರು ಬೇರೆ ಜೈಲುಗಳಿಗೆ ಶಿಫ್ಟ್ ಆಗಲಿದ್ದಾರೆ.
ಆದರೆ ಇದೇ ಕೊಲೆ ಪ್ರಕರಣ ಆರೋಪಿಗಳಾದ ಪವಿತ್ರಾಗೌಡ, ಅನುಕುಮಾರ್ ಹಾಗೂ ದೀಪಕ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮುಂದುವರೆಯಲಿದ್ದಾರೆ. ಇನ್ನು ದರ್ಶನ್ ಗ್ಯಾಂಗ್ ಸ್ಥಳಾಂತರ ಹಿನ್ನಲೆಯಲ್ಲಿ ಬಳ್ಳಾರಿ, ಮೈಸೂರು, ಬೆಳಗಾವಿ, ಕಲುಬರಗಿ, ಧಾರವಾಡ, ಶಿವಮೊಗ್ಗ ಹಾಗೂ ವಿಜಯಪುರ ಕೇಂದ್ರ ಕಾರಾಗೃಹಗಳಲ್ಲಿ ಸಹ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2 ದಿನಗಳ ಹಿಂದೆ ಜೈಲಿನಲ್ಲಿ ಕುಖ್ಯಾತ ರೌಡಿ ಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾ ರ್ಡನ್ ನಾಗ, ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ಜತೆ ಸಿಗರೇಟ್ ಸೇದುತ್ತ ಚಹಾ ಮಗ್ ಹಿಡಿದು ಕುರ್ಚಿಯಲ್ಲಿ ಕುಳಿತಿರುವ ದರ್ಶನ್ ಪೋಟೋ ವೈರಲ್ ಆಗಿತ್ತು.