ಬೆಂಗಳೂರು : ‘ನಾನು ಸ್ನೇಹಕ್ಕೆ ಕಟ್ಟು ಬಿದ್ದು ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾದೆ. ನಮ್ಮಿಬ್ಬರ ಭೇಟಿಗೆ ಗೆಳೆತನೆ ಹೊರತು ಬೇರೆ ಕಾರಣಗಳಿರಲಿಲ್ಲ’ ಎಂದು ನಟ ಚಿಕ್ಕಣ್ಣ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾರೆ. ಸಾಕ್ಷಿ ಹೇಳಿಕೆ ಬಳಿಕ ದರ್ಶನ್ ಭೇಟಿ ಮಾಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಚಿಕ್ಕಣ್ಣ ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿ ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸಿಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ಚಿಕ್ಕಣ್ಣರನ್ನು ಸುಮಾರು ಹೊತ್ತು ಪ್ರಶ್ನಿಸಿ ತನಿಖಾಧಿಕಾರಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಮತ್ತೆ ಈ ತಪ್ಪು ಮರುಕಳಿಸಿದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾದಿತು ಎಂದು ಚಿಕ್ಕಣ್ಣಗೆ ಎಸಿಪಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.
ನೀನು ದರ್ಶನ್ಗೆ ಬಹಳ ಆತ್ಮೀಯ. ಇಂಥ ಸಮಯದಲ್ಲಿ ಅವರನ್ನು ಮಾತನಾಡಿಸದೆ ಇರೋದು ಸರಿಯಲ್ಲ ಎಂದು ಆಪ್ತರು ಹೇಳಿದ್ದರು. ಹೀಗಾಗಿ ಜೈಲಿನಲ್ಲಿ ದರ್ಶನ್ರನ್ನು ಭೇಟಿಯಾದೆ. ಇದರ ಹೊರತು ಬೇರೆ ಕಾರಣವಿಲ್ಲ ಎಂದು ಚಿಕ್ಕಣ್ಣ ಹೇಳಿದ್ದಾರೆ ಎನ್ನಲಾಗಿದೆ. ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಣ್ಣ ಸಾಕ್ಷಿ ಹೇಳಿಕೆ ನೀಡಿದ ಬಳಿಕ ಜೈಲಿನಲ್ಲಿರುವ ದರ್ಶನ್ರನ್ನು ಭೇಟಿಯಾಗಬಾರದು ಎಂಬುದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ