Home » ಪೊಲೀಸ್‌ ಡಾಗ್‌ ಐಕಾನ್‌ ನಿವೃತ್ತಿ
 

ಪೊಲೀಸ್‌ ಡಾಗ್‌ ಐಕಾನ್‌ ನಿವೃತ್ತಿ

by Kundapur Xpress
Spread the love

ಉಡುಪಿ : ಉಡುಪಿ ಜಿಲ್ಲೆಯ ಪೊಲೀಸ್ ಶ್ವಾನದಳದಲ್ಲಿ ಕಳೆದ 10 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಶ್ವಾನ ‘ಐಕಾನ್’ ನಿವೃತ್ತಿ ಹೊಂದಿದ್ದು ಅದನ್ನು ಜಿಲ್ಲಾ ಪೊಲೀಸ್ ವತಿಯಿಂದ ಗೌರವಿಸಿ ಅಧಿಕೃತವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸಲಾಯಿತು.

ಲ್ಯಾಬ್ರಡಾರ್ ರಿಟ್ರೇವರ್ ತಳಿಯ ಈ ಶ್ವಾನವು 2014ರ ಆ.5ರಂದು ಜನಿಸಿದ್ದು, ನ.5ರಂದು ಶ್ವಾನದಳ ವಿಭಾಗಕ್ಕೆ ಸೇರ್ಪಡೆಗೊಂಡಿತು. ಅದಕ್ಕೆ ಐಕಾನ್ ಎಂದು ಹೆಸರಿಡಲಾಗಿತ್ತು. ನಂತರ ಸಿ.ಎ.ಆರ್.ಸೌತ್ ಆಡುಗೋಡಿಯಲ್ಲಿ ಸ್ಫೋಟಕ ಪತ್ತೆ ಬಗ್ಗೆ 9 ತಿಂಗಳು ಕಠಿಣ ತರಬೇತಿಯನ್ನು ನೀಡಲಾಗಿತ್ತು. ಪೊಲೀಸ್ ಸಿಬ್ಬಂದಿ ಗಣೇಶ ಎಂ. ಅವರು ಐಕಾನ್‌ಗೆ ಹ್ಯಾಂಡ್ಲರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಸ್ಪೋಟಕ ಪತ್ತೆಯಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದ್ದ ಐಕಾನ್, ತನ್ನ 10 ವರ್ಷಗಳ ಕರ್ತವ್ಯದ ಸಂದರ್ಭದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸುಮಾರು 417ಕ್ಕಿಂತ ಅಧಿಕ ವಿಶೇಷ ಕರ್ತವ್ಯ ನಿರ್ವಹಿಸಿದೆ. ಬೆಂಗಳೂರಿಗೆ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ವಿದೇಶಿ ಗಣ್ಯರು ಆಗಮನದ ಸಂದರ್ಭದಲ್ಲಿ ಹಾಗೂ ಏರ್ ಶೋ, ಜಿ- 20 ಶೃಂಗಸಭೆ, ದತ್ತ ಜಯಂತಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ, ಸಾಗರ ಕವಚ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿತ್ತು

ಅಲ್ಲದೇ ಮಲ್ಪೆ ಬಂದರು, ಕಾಪು ಲೈಟ್ ಹೌಸ್, ಮಣಿಪಾಲ ಯೂನಿವರ್ಸಿಟಿ, ರೈಲ್ವೇ ನಿಲ್ದಾಣ, ಮೈಸೂರು ದಸರಾ, ನ್ಯಾಷನಲ್ ನಾರ್ಕೋಟಿಕ್ಸ್ ಕಾನ್ವರೆನ್ಸ್, ಬ್ರಹ್ಮಾವರದಲ್ಲಿ ಕಚ್ಚಾ ಬಾಂಬ್ ಪತ್ತೆ ಇತ್ಯಾದಿ ಸಂದರ್ಭಗಳಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ಯಾವುದೇ ವಿಧ್ವಂಸಕ ಕೃತ್ಯ ನಡೆಯದಂತೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದೆ.

2020ರ ಫೆ.22ರಂದು ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಬೆಳ್ಳಿಯ ಪದಕ ಪಡೆದು, ಉಡುಪಿ ಜಿಲ್ಲೆಗೆ ಹಾಗೂ ಪೊಲೀಸ್ ಇಲಾಖೆಗೆ ಗೌರವವನ್ನು ತಂದು ಕೊಟ್ಟಿತ್ತು.

ಕರ್ತವ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್ಪಿ ಡಾ.ಅರುಣ್ ಕೆ., ಎಎಸ್ಪಿ ಪರಮೇಶ್ವರ ಹೆಗಡೆ, ಉಡುಪಿ .ಡಿವೈಎಸ್ಪಿ ಪ್ರಭು ಡಿ.ಟಿ. ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಎಎಸ್ಪಿ ತಿಮ್ಮಪ್ಪ ಗೌಡ ಜಿ., ಇನ್ಸ್‌ಪೆಕ್ಟರ್‌ಎಸ್. ರವಿಕುಮಾ‌ರ್ ಉಪಸ್ಥಿತರಿದ್ದರು.

   

Related Articles

error: Content is protected !!