Home » ಬೈಂದೂರಿನಲ್ಲಿ ಯಶಸ್ವಿ ಅಂತಾರಾಷ್ಟ್ರೀಯ ಉದ್ಯೋಗ ಮೇಳ
 

ಬೈಂದೂರಿನಲ್ಲಿ ಯಶಸ್ವಿ ಅಂತಾರಾಷ್ಟ್ರೀಯ ಉದ್ಯೋಗ ಮೇಳ

8000 ಅಭ್ಯರ್ಥಿಗಳ ನೋಂದಣಿ, ಸಮೃದ್ಧ ಬೈಂದೂರು ಟ್ರಸ್ಟ್ ಸಹಭಾಗಿತ್ವದಲ್ಲಿ ಅಭೂತಪೂರ್ವ ‌ಕಾರ್ಯಕ್ರಮ

by Kundapur Xpress
Spread the love

ಬೈಂದೂರು : ಬೆಂಗಳೂರು, ಮುಂಬೈ, ಚೆನ್ನೈ, ಪೂಣೆ ಮೊದಲಾದ ಮಹಾನಗರಗಳಲ್ಲಿ ಆಗುತ್ತಿರುವ ಅಂತಾರಾಷ್ಟ್ರೀಯ ಉದ್ಯೋಗ ಮೇಳ ಇದೇ‌ ಮೊದಲ ಬಾರಿಗೆ ಬೈಂದೂರಿನಲ್ಲಿ ನಡೆದಿದ್ದು, ಉದ್ಯೋಗಾಕಾಂಕ್ಷಿಗಳಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ.

ಸಮೃದ್ಧ ಬೈಂದೂರು ಟ್ರಸ್ ವತಿಯಿಂದ ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ(ಅಂತಾರಾಷ್ಟ್ರೀಯ) ಹಾಗೂ ಅಜಿನುರಹಾ ಸಂಸ್ಥೆಯ ಸಹಭಾಗಿತ್ವದಲ್ಲಿ ಶನಿವಾರ ಬೈಂದೂರಿನ ಜೆ.ಎನ್. ಆರ್.‌ಸಭಾಂಗಣದಲ್ಲಿ ಯಶಸ್ವಿ ಅಂತಾರಾಷ್ಟ್ರೀಯ ಉದ್ಯೋಗ ಮೇಳ ನಡೆಯಿತು.

ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಸಂಸದರಾದ ಬಿ.ವೈ.ರಾಘವೇಂದ್ರ ಅವರು, ಯುವ ಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ‌ಹಲವು ಕಾರ್ಯಕ್ರಮ ರೂಪಿಸುತ್ತಿದ್ದೇವೆ.‌ ಈ ರೀತಿಯ ಉದ್ಯೋಗ ಮೇಳದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸುಲಭವಾಗಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಶೇಷ ತರಬೇತಿ, ಭಾಷೆ ಕಲಿಸುವುದು ಇತ್ಯಾದಿ ನಡೆಯಲಿದೆ. ಕ್ಷೇತ್ರದ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಪೂರಕವಾಗಿ ಇಂತಹ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು, ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಹಿನ್ನೆಲೆಯಲ್ಲಿ ಕೈಗಾರಿಕೆಗಳನ್ನು ಸೆಳೆಯುವುದು, ಕೈಗಾರಿಕೆ ಕೇಂದ್ರಗಳ ಸ್ಥಾಪನೆಗೆ ಪ್ರಯತ್ನ ಎಲ್ಲವೂ ನಡೆಯುತ್ತಿದೆ. ತಕ್ಷಣ ನಮ್ಮ ಯುವಜನತೆಗೆ ಒಂದಿಷ್ಟು ಉದ್ಯೋಗ ಸೃಷ್ಟಿಸಿ ಕೊಡಲು ಈ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ಬಂದಿದ್ದಾರೆ ಎಲ್ಲರಿಗೂ ಶುಭ ಹಾರೈಸಿದರು.

ಸಮೃದ್ಧ ಬೈಂದೂರು ಟ್ರಸ್ಟ್ ಅಧ್ಯಕ್ಷ ಸುರೇಶ್ ಶೆಟ್ಟಿ ಅವರು ಮಾತನಾಡಿ, ಬೈಂದೂರಿನ ಒಂದು ತರಬೇತಿ ಕೇಂದ್ರ ಶೀಘ್ರ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅಜಿನೂರಾಹ ಸಂಸ್ಥೆಯ ಪ್ರತಿನಿಧಿಗಳು, ಉದ್ಯಮಿಗಳಾದ ವೆಂಕಟೇಶ ಕಿಣಿ, ಕೃಷ್ಣಪ್ರಸಾದ್ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು

ಮೇಳದ ಹೈಲೈಟ್ಸ್
ಅಂತಾರಾಷ್ಟ್ರೀಯ ಬೃಹತ್ ಉದ್ಯೋಗ ಮೇಳಕ್ಕೆ 8000ಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 600ಕ್ಕೂ ಅಧಿಕ‌ ನರ್ಸಿಂಗ್ ಪದವೀಧರರು ಸೇರಿದಂತೆ ಇತರೆ ವಿಭಾಗದ ಅತ್ಯಧಿಕ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡರು.
ಜಪಾನ್, ಮಲೇಷಿಯಾ, ಜರ್ಮನ್, ಕ್ರೋವೆಷಿಯಾ, ಗಲ್ಫ್‌ ರಾಷ್ಟ್ರಗಳ ವಿವಿಧ ಕಂಪೆನಿಗಳು ಭಾಗವಹಿಸಿವೆ. ವಿದ್ಯಾರ್ಥಿಗಳು, ಪದವೀಧರರು, ಪಿಯುಸಿ ಓದಿರುವರು ಹೀಗೆ ಎಲ್ಲ ವರ್ಗದವರು ಪಾಲ್ಗೊಂಡಿದ್ದರು.

ಏನೇನು ಉದ್ಯೋಗ?
ನರ್ಸಿಂಗ್ ಕೇರ್, ಬಿಲ್ಡಿಂಗ್ ಕ್ಲೀನಿಂಗ್ ಮ್ಯಾನೇಜ್ಮೆಂಟ್, ಕೈಗಾರಿಕ ಉತ್ಪನ್ನ ಸಿದ್ಧಡಿಸುವುದು, ನಿರ್ಮಾಣ ವಲಯ, ಏವಿಯೇಷನ್, ಕೃಷಿ, ಮೀನುಗಾರಿಕೆ ಮತ್ತು ಸಂಬಂಧಿತ ಉದ್ಯೋಗ, ಆಹಾರ ಪೂರೈಕೆ, ರೈಲ್ವೇ ಟ್ರಾನ್ಸ್‌ಪೋರ್ಟ್‌, ಫಾರೆಸ್ಟ್ರೀ ಹೀಗೆ ಹಲವು ಉದ್ಯೋಗಾವಕಾಶಗಳ‌ ಹಿನ್ನಲೆಯಲ್ಲಿ ಸಂದರ್ಶನ ನಡೆದಿದೆ.

ಎಲ್ಲರಿಗೂ ಸಂದೇಶ ರವಾನೆ
ಉದ್ಯೋಗ ಮೇಳದಲ್ಲಿ ಸೆಲೆಕ್ಟ್ ಆದವರಿಗೆ ಹಾಗೂ ಆಗದವರಿಗೆ ಇಬ್ಬರಿಗೂ ಇ- ಮೇಲ್ ಮೂಲಕ ಕನ್ಫರ್ಮೇಶನ್ ಮೇಲ್ ಹೋಗಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ತರಬೇತಿಗಳು ಇರಲಿ. ಅನಂತರ ವಿದೇಶಕ್ಕೆ ಹೋಗಲು ಬೇಕಾದ ವ್ಯವಸ್ಥೆ ಆಗಲಿದೆ. ಒಬ್ಬರಿಗೆ ಒಂದು ದೇಶದ ಒಂದು ಉದ್ಯೋಗಕ್ಕೆ ಸಂಬಂಧಿಸಿದಂತೆ ಸಂದರ್ಶನಕ್ಕೆ ಅನುಕೂಲ ಆಗುವಂತೆ 40-50 ಡೆಸ್ಕ್ ವ್ಯವಸ್ಥೆ ಮಾಡಲಾಗಿತ್ತು

ವೃತ್ತಿ ಮಾರ್ಗದರ್ಶನ
ಉದ್ಯೋಗ ಸಂದರ್ಶನದ ಜತೆಗೆ ಅಭ್ಯರ್ಥಿಗಳಿಗೆ ನುರಿತ ತಜ್ಞರ ಮೂಲಕ ವೃತ್ತಿ ಮಾರ್ಗದರ್ಶನ ನೀಡಲಾಗಿದೆ. ಹಾಗೇಯೆ ಸಂದರ್ಶನ ಎದುರಿಸುವುದು ಹೇಗೆ ಎಂಬುದನ್ನು ಕಲಿಸಿಕೊಡುವ ಕಾರ್ಯವೂ ಆಗಿದೆ.

ಅಚ್ಚುಕಟ್ಟಾದ ವ್ಯವಸ್ಥೆ

ಉದ್ಯೋಗ ‌ಮೇಳವನ್ನು ಅಚ್ಚುಕಟ್ಟಾಗಿ ‌ನಡೆಸುವ ಜೊತೆಗೆ ಬಂದ ಅಭ್ಯರ್ಥಿಗಳಿಗೆ ಅನಾನುಕೂಲ ಆಗಬಾರದು ಎಂಬ ಕಾರಣಕ್ಕೆ ಸಭಾಂಗಣ ಒಳಗೆ ಮತ್ತು ಹೊರಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಊಟ, ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನೂರಾರು ಸ್ವಯಂಸೇವಕರು, ಕಾರ್ಯಕರ್ತರು ಯಶಸ್ವಿಗಾಗಿ ಶ್ರಮಿಸಿದ್ದಾರೆ.

   

Related Articles

error: Content is protected !!