ಬ್ಕೈಂದೂರು : ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮುದ್ದು ಕೃಷ್ಣ ಸ್ಪರ್ಧೆ ಅತ್ಯಂತ ಸಂಭ್ರಮದಿಂದ ನೆರವೇರಿತು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಣೇಶ ಮೊಗವೀರರವರು ಸಮಾರಂಭವನ್ನು ಉದ್ಘಾಟಿಸಿ ‘ಮುದ್ದು ಮುಖದ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿ ಆ ಮೂಲಕ ಪುಟಾಣಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಜನ್ಮಾಷ್ಠಮಿಯ ಈ ಪರ್ವ ಕಾಲದಲ್ಲಿ ಸ್ಪರ್ಧೆಗೆ ಆಗಮಿಸಿದ ಸರ್ವ ಸ್ಪರ್ಧಿಗಳಿಗೂ ಶುಭ ಹಾರೈಸಿದರು’.ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದ ಕನ್ನಡದ ಸಾಹಿತಿಯಾಗಿರುವ ಶ್ರೀಮತಿ ಪೂರ್ಣಿಮಾ ಕಮಲಶಿಲೆಯವರು ಮಾತನಾಡಿ ‘ಕಡಲ ಕಿನಾರೆಯ ಸಮೀಪದಲ್ಲಿರುವ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನವರು ಮುದ್ದು ಕೃಷ್ಣ ಸ್ಪರ್ಧೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಿದ್ದಾರೆ.ಭಗವಾನ್ ಕೃಷ್ಣನ ವೇಷ ಧರಿಸಿ ವೇದಿಕೆಯ ಮೇಲೆ ಪುಟಾಣಿಗಳು ಅಭಿನಯಿಸಿದಾಗ ಪೋಷಕರ ಮೊಗದಲ್ಲಿ ಮೂಡುವ ಸಂತೋಷವೇ ನಿಜವಾದ ಬಹುಮಾನ.ಇಂತಹ ವೇದಿಕೆಗಳೇ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಶುಭ ಹಾರೈಸಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 7777 ರೂಪಾಯಿಗಳು,ದ್ವಿತೀಯ 6666 ರೂಪಾಯಿಗಳು, ತೃತೀಯ 5555ರೂಪಾಯಿಗಳು, ಅದರೊಂದಿಗೆ ಶಾಶ್ವತ ಫಲಕ,ಚಿನ್ನದ ಪದಕ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಚಿನ್ನದ ಪದಕ ಹಾಗೂ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲು ಡ್ರಾಮಾ ಜ್ಯೂನಿಯರ್ಸ್ ಸೀಸನ್ 4ರ ವಿಜೇತೆ ಸಮೃದ್ಧಿ ಮೊಗವೀರ,ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಪ್ರತಿಭೆ ಮಾನ್ವಿ ಸಾಲಿಗ್ರಾಮ,ಸಂಗೀತ ಕ್ಷೇತ್ರದ ಬಾಲ ಪ್ರತಿಭೆ ಆದೀಶ್ ಬಿದ್ಕಲ್ ಕಟ್ಟೆ ವಿಭಿನ್ನ ಕಾರ್ಯಕ್ರಮವನ್ನು ನೀಡಿದರು.ಪ್ರಸಿದ್ಧ ಗಾಯಕರಿಂದ ಸಂಗೀತ ರಸಮಂಜರಿ ಹಾಗೂ ಜನತಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಆಕರ್ಷಕವಾದ ಮನರಂಜನಾ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಕು| ದೀಪಿಕಾ ಆಚಾರ್ಯ, ಬೋಧಕ/ಬೋಧಕೇತರ ವೃಂದದವರು, ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರು ಉಪಸ್ಥಿತಿತರಿದ್ದರು.ಜನತಾ ಪದವಿಪೂರ್ವ ಕಾಲೇಜಿನ ಕಾರ್ಯಕ್ರಮ ಸಂಯೋಜಕ ರಾದ ಶ್ರೀ ಉದಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.