Home » ಅಭಿವೃದ್ಧಿಯನ್ನು ಮರೆತ ರಾಜ್ಯ ಸರಕಾರ
 

ಅಭಿವೃದ್ಧಿಯನ್ನು ಮರೆತ ರಾಜ್ಯ ಸರಕಾರ

ರೇಷ್ಮಾ ಉದಯ್‌ ಶೆಟ್ಟಿ

by Kundapur Xpress
Spread the love

ಉಡುಪಿ : ಉಡುಪಿಯಲ್ಲಿ ಈ ಬಾರಿ ಧಾರಾಕಾರವಾಗಿ ಸುರಿದ ಮಳೆಗೆ ಜಿಲ್ಲಾದ್ಯಂತ ಅಪಾರ ಹಾನಿಯಾಗಿದ್ದು, ಜಿಲ್ಲೆಯ ಹೆದ್ದಾರಿಗಳು ಸೇರಿದಂತೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಬಹುತೇಕ ರಸ್ತೆಗಳು ಹಾಳಾಗಿವೆ. ಅಂಗನವಾಡಿ ಶಾಲಾ ಕಟ್ಟಡಗಳು, ಕಾಲುಸಂಕ, ತಡೆಗೋಡೆ, ವಿದ್ಯುತ್ ಕಂಬಗಳಿಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು, ಸುಮಾರು 234 ಕೋಟಿ ರೂಪಾಯಿ ಮೌಲ್ಯದಷ್ಟು ಹಾನಿಯಾಗಿರುವ ವರದಿಯನ್ನು ಜಿಲ್ಲಾಡಳಿತವು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರೂ, ಇದುವರೆಗೂ ನಯಾ ಪೈಸೆ ಪರಿಹಾರ ಬಿಡುಗಡೆಯಾಗದೇ ಇರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್‌ ಶೆಟ್ಟಿ ತಿಳಿಸಿದ್ದಾರೆ.ಇದೀಗ ರಸ್ತೆಗಳ ತುರ್ತು ಮರು ದುರಸ್ತಿ ಕಾಮಗಾರಿಗಳಿಗೆ ಅನುದಾನವಿಲ್ಲದೆ ವಿದ್ಯಾರ್ಥಿಗಳು, ರೈತರೂ ಸೇರಿದಂತೆ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಹಾಯಾಗಿರುವುದು ಶೋಚನೀಯ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಗರಣಗಳ ಸರಮಾಲೆಯ ನಡುವೆ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವ ತಂತ್ರಗಾರಿಕೆಯಲ್ಲಿಯೇ ಮಗ್ನರಾಗಿದ್ದು, ಇನ್ನಿತರ ಸಚಿವರು ರಾಜ್ಯದ ಸಮಸ್ಯೆಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮುಖ್ಯಮಂತ್ರಿಗಳಿಂದ ತೆರವಾಗಬಹುದಾದ ಕುರ್ಚಿಗೆ ಟವೆಲ್ ಹಾಕಲು ಕಾಯುತ್ತಿದ್ದಾರೆ.ಬಿಜೆಪಿ ನೇತೃತ್ವದ ಸರಕಾರದ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಇದೇ ರೀತಿ ಮಳೆಯ ಅತಿವೃಷ್ಟಿಯಿಂದ ರಾಜ್ಯಾದ್ಯoತ ಹಾನಿಯಾದಾಗ ಸಾಕಾಲಿಕ ನ್ಯಾಯಯುತ ಪರಿಹಾರ ದೊರೆತಿರುವುದನ್ನು ರಾಜ್ಯದ ಜನತೆ ಇಂದು ಸ್ಮರಿಸುತ್ತಿದ್ದಾರೆ.ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅಸ್ಥಿತ್ವಕ್ಕೆ ಬಂದು 16 ತಿಂಗಳು ಕಳೆದರೂ ರಾಜ್ಯದಲ್ಲಿ ಅಭಿವೃದ್ಧಿಯ ಶಕೆಯೇ ಪ್ರಾರಂಭವಾಗಿಲ್ಲ. ಇಡೀ ಸರಕಾರವೇ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿ ನಿಷ್ಕ್ರಿಯತೆಯಿಂದ ನಲುಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮಳೆ ಹಾನಿ ಪರಿಹಾರ ಹಾಗೂ ಸ್ಥಳೀಯ ಅಭಿವೃದ್ಧಿಗೆ ಹಣ ಬಿಡುಗಡೆಗಾಗಿ ಜನತೆ ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾದ ವಿಷಮ ಸ್ಥಿತಿ ಉದ್ಭವಿಸುವುದು ನಿಶ್ಚಿತ ಎಂದು ರೇಷ್ಮಾ ಉದಯ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   

Related Articles

error: Content is protected !!