ಕುಂದಾಪುರ : ಉತ್ತಮವಾದ ಆಯ್ಕೆ ಒಳ್ಳೆಯ ಉದ್ಧೇಶ, ಆತ್ಮವಿಶ್ವಾಸ, ಪೂರ್ವ ತಯಾರಿ, ಸತತ ಪರಿಶ್ರಮಗಳು ವಿದ್ಯಾರ್ಥಿಗಳ ಬದುಕು ಪರಿಪೂರ್ಣವಾಗಲು ಅಗತ್ಯ. ಒಳ್ಳೆಯ ಪುಸ್ತಕದ ಓದು ಜೀವನವನ್ನು ಹೇಗೆ ನಿಭಾಯಿಸಬೇಕೆಂಬುವುದನ್ನು ಕಲಿಸುತ್ತದೆ. ಹಾಗಾಗಿ ಒಳ್ಳೆಯ ಪುಸ್ತಕ ಹಾಕಿಕೊಟ್ಟ ಹಾದಿಯಲ್ಲಿ ಬದುಕುವಂತಾದಾಗ ಅದು ಇತರರಿಗೆ ಮಾದರಿಯಾಗುತ್ತದೆ ಎಂದು ಶ್ರೀ ಕೃಷ್ಣಪ್ರಸಾದ್ ಇಂಡಸ್ಟ್ರೀಸ್‌ನ ಮಾಲಕ ಶ್ರೀ ಸಂಪತ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಕಾಲೇಜಿನ ಕಾರ್ಯಕ್ರಮಗಳಿಗೆ ಹೇಗೆ ಸ್ಪಂಧಿಸುತ್ತದೆ ಎಂಬುವುದನ್ನು ತಿಳಿಸಿದರು. ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಅತಿಥಿಗಳನ್ನು ಪರಿಚಯಿಸಿ, ಶ್ರೀಮತಿ ರೇಷ್ಮಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಕಾರ್ಯದರ್ಶಿ ವಿನಾಯಕ್ ಎನ್. ಅಡಿಗ ಪ್ರತಿಜ್ಞಾ ವಿಧಿ ಬೋಧಿಸಿ, ಎಸ್‌ಕ್ಯೂಎಸಿ ಪ್ರತಿನಿಧಿ ಶ್ರದ್ಧಾ ಆರ್. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಕಾರ್ಯವೈಖರಿಯನ್ನು ಪರಿಚಯಿಸಿದರು.
ವಾಣಿಜ್ಯ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಯೋಗೀಶ್ ಶ್ಯಾನುಭೋಗ್ ವಂದಿಸಿ, ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಸ್ಟಾಲಿನ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.