ಬೈಂದೂರು : ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲರಾಗಿ ಆಯ್ಕೆಯಾದ ಕುಂದಾಪುರ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜೆ. ಅವರಿಗೆ ಪ್ರಶಸ್ತಿ ನೀಡದೇ ರಾಜ್ಯ ಸರ್ಕಾರ ದ್ವೇಷ ಸಾಧಿಸಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಿಡಿಕಾರಿದ್ದಾರೆ.ಸರ್ಕಾರಿ ಶಾಲೆ ಸಹಿತ ಪದವಿ ಪೂರ್ವ ಕಾಲೇಜಿನ ವರೆಗೂ ಕಡ್ಡಾಯವಾಗಿ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಅಂದಿನ ಸರ್ಕಾರ ಹಾಗೂ ಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿ ರಾಮಕೃಷ್ಣ ಅವರು ಅದನ್ನು ಪಾಲನೆ ಮಾಡಿದ್ದಾರೆ. ಸರ್ಕಾರದ ನಿಯಮ ಪಾಲನೆ ಮಾಡಿದ್ದೇ ತಪ್ಪು ಎನ್ನುವ ಸಂದೇಶವೊಂದನ್ನು ಸರ್ಕಾರ ರವಾನಿಸಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.ವಿದ್ಯಾವಂತರ ಇಲಾಖೆಯಲ್ಲಿ ಅವಿದ್ಯಾವಂತ ನಡೆ ಶಿಕ್ಷಣ ಇಲಾಖೆ ಎಲ್ಲರನ್ನು ಸಮಾನವಾಗಿ ಕಾಣಬೇಕು. ವಿದ್ಯಾವಂತರ ಇಲಾಖೆಯಾಗಿ ಅವಿದ್ಯಾವಂತರಂತೆ ವರ್ತನೆ ತೋರುವುದು ತರವಲ್ಲ.ಇಡೀ ಕರಾವಳಿ ವಿದ್ಯಾವಂತರ ನಾಡು ಎಂದು ಖ್ಯಾತಿ ಪಡೆದಿದೆ. ಯಾವುದೋ ದುಷ್ಟ ಶಕ್ತಿಗಳ ಒತ್ತಡಕ್ಕೆ ಮಣಿದು ಸರ್ಕಾರ ಪ್ರಾಂಶುಪಾಲರ ನೈತಿಕ ಬಲ ಕುಗ್ಗಿಸುತ್ತಿರುವುದು ಸರಿಯಲ್ಲ.ಉತ್ತಮ ಪ್ರಾಂಶುಪಾಲರ ಆಯ್ಕೆಗೆ ಇಲಾಖೆಯಿಂದ ಸಮಿತಿ ರಚನೆ ಮಾಡಲಾಗಿತ್ತು. ಸ್ವೀಕಾರಗೊಂಡ ಎಲ್ಲ ಅರ್ಜಿ/ಪ್ರಸ್ತಾವನೆಗಳನ್ನು ಸಮಿತಿ ಕೂಲಂಕುಷವಾಗಿ ಪರಿಶೀಲಿಸಿ ರಾಜ್ಯ ಮಟ್ಟಕ್ಕೆ ಕಳುಹಿಸಿದೆ. ರಾಜ್ಯಮಟ್ಟದ ಸಮಿತಿ ಇದನ್ನು ಪರಿಶೀಲಿಸಿ ಅಂತಿಮಗೊಳಿಸಿದೆ. ಶೈಕ್ಷಣಿಕ, ಸಾಮಾಜಿಕ ಸಾಧನೆಯನ್ನು ಪರಿಗಣಿಸಿ ತಜ್ಞರ ಸಮಿತಿ ನಡೆಸಿದ ಆಯ್ಕೆಯನ್ನು ಯಾರದೋ ಒತ್ತಡಕ್ಕೆ ಮಣಿದು ಸರ್ಕಾರ ವಾಪಸ್ ಪಡೆದಿರುವುದು ಹೇಯ ಕೃತ್ಯವಾಗಿದೆ.ಸರ್ಕಾರ ಈ ಕೂಡಲೇ ಅವರಿಗೆ ಪ್ರಶಸ್ತಿ ಪ್ರದಾನಿಸಿ, ಕ್ಷಮೆ ಯಾಚಿಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ.