ಬೆಂಗಳೂರು : ರಾಜ್ಯದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಾದ ಸಂದರ್ಭದಲ್ಲಿ ಬಂದು ನಿಂತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್ ಸರಕಾರದ ಬೆದರಿಕೆಗಳು, ಬೆದರಿಕೆ ತಂತ್ರಗಳು, ಕುತಂತ್ರ ಇದ್ಯಾವುದಕ್ಕೂ ಕೂಡ ಭಯ ಪಡುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ ಸೇರಿ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಕಳೆದ ಕೆಲವು ದಿನಗಳಿಂದ ಹೋರಾಟ ಮಾಡುತ್ತ ಬಂದಿದೆ. ಮುಖ್ಯಮಂತ್ರಿಗಳ ಪರಿಸ್ಥಿತಿ, ಸಚಿವರ ಪರಿಸ್ಥಿತಿ ಸಹಜವಾಗಿಯೇ ನಮಗೆ ಅರ್ಥವಾಗುತ್ತಿದೆ. ಸಿಎಂ ರಾಜೀನಾಮೆ ಕೊಡಬೇಕಾದ ಸಂದರ್ಭ ಬಂದಿದ್ದು, ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕಾಗಿಯೇ ಪಿತೂರಿ ನಡೆದಿದೆ. ಸಂದರ್ಭ ಬಂದಾಗ ಅದಕ್ಕೆ ಸೂಕ್ತ ಉತ್ತರ ಕೊಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಎತ್ತಿನಹೊಳೆ ಯೋಜನೆ: ಕಳೆದ ಹಲವಾರು ದಶಕಗಳಿಂದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಭಾಗಕ್ಕೆ ನೀರು ಕೊಡುವ ಯೋಜನೆ ಇದಾಗಿದೆ. ಇದರ ಆರಂಭದಲ್ಲಿ ಸುಮಾರು 8,500 ಕೋಟಿ ಯೋಜನಾ ವೆಚ್ಚ ಇದ್ದುದು ಈಗ ಅದು 20-22,500 ಕೋಟಿಗೆ ಏರಿದೆ. ಈ ಯೋಜನೆಗೆ ಚಾಲನೆ ನೀಡಿದ್ದು ಸಂತೋಷ; ಆದರೆ, ಅದರ ಮೂಲ ಉದ್ದೇಶ ಈಡೇರಲಿದೆಯೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿದೆ ಎಂದು ತಿಳಿಸಿದರು.