ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದು ಸೋಮವಾರ ಮುಕ್ತಾಯಗೊಳ್ಳಲಿದೆ. ನಟ ದರ್ಶನ್ ಸೇರಿದಂತೆ ಎಲ್ಲ 17 ಮಂದಿ ಆರೋಪಿಗಳು ಕಾರಾಗೃಹದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರಾಗಲಿದ್ದಾರೆ.
ಪ್ರಕರಣ ಸಂಬಂಧ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿರುವ 3,991 ಪುಟಗಳ ದೋಷಾರೋಪಪಟ್ಟಿಗೆ ಸಿಸಿ ನಂಬರ್ ಆಗಿದೆ. ಆರೋಪಿಗಳ ಪರ ವಕೀಲರಿಗೆ ಸೋಮವಾರವೇ ಆರೋಪ ಪಟ್ಟಿಯ ಪ್ರತಿಗಳು ಸಿಗಲಿವೆ. ನಂತರ ಅದನ್ನು ಪರಿಶೀಲಿಸಿ, ನಟ ದರ್ಶನ್ ಪರ ವಕೀಲರು ಜಾಮೀನು ಕೋರಿ ಸೆಷನ್ಸ್ ನ್ಯಾಯಾ ಲಯಕ್ಕೆ ಅರ್ಜಿ ಹಾಕುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಕೆಲ ಆರೋಪಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿದ್ದ ಹಿನ್ನೆಲೆ ರಾಜ್ಯದ ವಿವಿಧ ಕಾರಾಗೃಹ ಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಎರಡನೇ ಆರೋಪಿ ದರ್ಶನ್‌ನನ್ನು ಬಳ್ಳಾರಿಗೆ ಸ್ಥಳಾಂತರಿಸಿದರೆ, ಉಳಿದ ಆರೋಪಿಗಳನ್ನು ಶಿವಮೊಗ್ಗ, ತುಮಕೂರು, ಧಾರವಾಡ, ಬೆಳಗಾವಿ, ಕಲಬುರಗಿ ಮೈಸೂರು ಹಾಗೂ ವಿಜಯಪುರದ ಕಾರಾಗೃಹಗಳಿಗೆ ವರ್ಗಾವಣೆ ಮಾಡಲಾಗಿತ್ತು