ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದ ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಪ್ರಮುಖ ರೂವಾರಿ ಮಾಜಿ ಸಚಿವ ಬಿ. ನಾಗೇಂದ್ರ ಎಂದು ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ. ಅಲ್ಲದೆ ನಿಗಮದ 20.19 ಕೋಟಿ ಹಣವನ್ನು ಇತ್ತೀಚಿನ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಲಾಗಿದೆ. ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ, ಸಾಕ್ಷಿನಾಶ, ಅಪರಾಧಿಕ ಒಳಸಂಚಿಗೆ ನಾಗೇಂದ್ರ ಅವರೇ ಪ್ರಮುಖವಾಗಿ ಕಾರಣ ಎಂದು ಹೇಳಿದೆ.
ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 4,970 ಪುಟಗಳ ಆರೋಪ ಪಟ್ಟಿ ಸಲ್ಲಿಕೆ ಮಾಡಿರುವ ಇ.ಡಿ. ಅಧಿಕಾರಿಗಳು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆಯಲ್ಲಿ ಬಿ.ನಾಗೇಂದ್ರರವರ ಪ್ರಮುಖ ಪಾತ್ರ ಇದೆ ಎಂದು ಉಲ್ಲೇಖಿಸಿ ಮೊದಲನೇ ಆರೋಪಿಯನ್ನಾಗಿ ಮಾಡಿದೆ.
ಇ.ಡಿ. ತನಿಖೆಗೂ ಮುನ್ನ ರಾಜ್ಯ ಸರ್ಕಾರದ ಎಸ್ಐಟಿ ತಂಡವು ತನಿಖೆ . ಕೈಗೊಂಡಿದ್ದು, ಎಸ್ಐಟಿ ತಂಡವು ನಾಗೇಂದ್ರ ಪಾತ್ರದ ಬಗ್ಗೆ ಯಾವುದೇ ಉಲ್ಲೇಖ ಮಾಡಿರಲಿಲ್ಲ ಆದರೆ, ಇ.ಡಿ. ಅಧಿಕಾರಿಗಳು ಪ್ರಕರಣದಲ್ಲಿ 1ನೇ ಆರೋಪಿಯನ್ನಾಗಿ ಮಾಡಿದೆ.