ಬೆಂಗಳೂರು : ಮುಡಾ ಪ್ರಕರಣದ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ನೀಡಿದ್ದ ಪೂರ್ವಾನುಮತಿ ರದ್ದುಪಡಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಇದೇ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಅರ್ಜಿ ಇತ್ಯರ್ಥದವರೆಗೆ ಪ್ರಾಸಿಕ್ಯೂಷನ್ ಅನುಮತಿ ಆಧರಿಸಿ ಮುಖ್ಯಮಂತ್ರಿಗಳ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹಾಗೂ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.
ಇದಕ್ಕೂ ಮುನ್ನ ರಾಜ್ಯಪಾಲರ ಕಚೇರಿಯ ಕಾರ್ಯದರ್ಶಿ ಪ್ರಕರಣದಲ್ಲಿ ಖಾಸಗಿ ದೂರುದಾರರಾಗಿರುವ ಟಿ.ಜೆ.ಅಬ್ರಾಹಾಂ, ಎಸ್.ಪಿ. ಪ್ರದೀಪ್ ಕುಮಾರ್ ಮತ್ತು ಸ್ನೇಹಮಯಿ ಕೃಷ್ಣ ಅವರ ಪರ ವಕೀಲರು ಮಂಡಿಸಿದ್ದ ಪ್ರತಿವಾದಕ್ಕೆ ಮುಖ್ಯಮಂತ್ರಿಗಳ ಪರ ಸುಪ್ರಿಂಕೋರ್ಟ್ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಫ್ಟಿ ಮೂರೂವರೆ ಗಂಟೆ ಕಾಲ ಮಂಡಿಸಿದರು ನಂತರ ಮುಖ್ಯಮಂತ್ರಿಗಳ ಪರ ಹೈಕೋರ್ಟ್ ఓరియ ವಕೀಲ ಪ್ರೊ.ರವಿವರ್ಮ ಕುಮಾರ್ ಕೂಡ ವಾದಿಸಿದರು.
ಸ್ನೇಹಮಯಿ ಕೃಷ್ಣ ಅವರ ಪರ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್ ಕೆಲ ನಿಮಿಷಗಳ ಕಾಲ ಸ್ಪಷ್ಟನೆ ನೀಡಿದರು. ಸರ್ಕಾರದ ಮುಖ್ಯ ಕಾಯದರ್ಶಿ ಪರ ರಾಜ್ಯ ಅಡ್ವಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು ರಾಜ್ಯಪಾಲರು ಪೂರ್ವಾನುಮತಿ ನೀಡಿರುವುದು ಹೇಗೆ ಕಾನೂನು ಬಾಹಿರವಾಗಿದೆ ಎಂಬ ಬಗ್ಗೆ ಒಂದೆರಡು ಅಂಶಗಳನ್ನು ನ್ಯಾಯಪೀಠದ ಮುಂದಿಟ್ಟರು