33. ಧ್ಯಾನದ ಅಂಕುಶ
ಮನಸ್ಸನ್ನು ನಾವು ಸರಿಯಾಗಿ ಗ್ರಹಿಸುವುದಾದರೂ ಹೇಗೆ? ತುಂಟ ಪೋರನಂತೆ ವರ್ತಿಸುವ ಆ ಮನಸ್ಸನ್ನು ನಾವು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲೆವೇ? ಮನಸ್ಸಿನ ಶಕ್ತಿ ಮತ್ತು ವೇಗವನ್ನು ಅಳೆಯಲು ಸಾಧ್ಯವೇ? ನಿಜಕ್ಕಾದರೆ ದೇಶ – ಕಾಲಗಳನ್ನು ಮೀರಿ ಹೋಗುವ ಶಕ್ತಿ ಮನಸ್ಸಿಗಿದೆ. ಅದು ಸಾಮಾನ್ಯ ಭೌತಿಕ ವಸ್ತು ಎನ್ನುವುದಕ್ಕಿಂತಲೂ ಅಭೌತಿಕ ಅಥವಾ ಆತ್ಮ ಸಂಬಂಧಿಯಾದ ತತ್ತವ ಎನ್ನಬೇಕಾಗುವುದು. ಇದು ಅಮೆರಿಕದ ವಿಜ್ಞಾನಿ ಡಾ| ಜೆ. ಬಿ. ರೈನ್ ರವರ ಅಭಿಮತ. ಆದರೆ ಈ ಅಭಿಪ್ರಾಯವನ್ನು ನಮ್ಮ ವೇದಾಂತಿಗಳು ಎಷ್ಟೋ ಸಹಸ್ರ ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು! ಮನಸ್ಸಿನೊಳಗೆ ದಾಖಲಾಗಿರುವ ಮಾಹಿತಿಗಳು, ಸ್ಮರಣೆಗಳು ಅತ್ಯಪಾರ. ಇಂದಿನ ಎಷ್ಟೋ ಸೂಪರ್ ಕಂಪ್ಯೂಟರ್‍ಗಳ ಸ್ಮರಣ ಶಕ್ತಿಯನ್ನು ಒಟ್ಟು ಹಾಕಿದರೂ ಮನುಷ್ಯನ ಮನಸ್ಸಿನ ಸ್ಮರಣಶಕ್ತಿಯ ಎದುರು ಅದು ಏನೂ ಅಲ್ಲ. ಆದರೂ ಮನುಷ್ಯನಿಂದ ಉಪಯೋಗವಾಗುವ ಈ ಶಕ್ತಿಯ ಪ್ರಮಾಣ ಮಾತ್ರ ಅತ್ಯಲ್ಪ! ಮನಸ್ಸಿನ ಸ್ಥಿರತೆ ಮತ್ತು ಏಕಾಗ್ರತೆಗೆ ಧ್ಯಾನವೇ ಬಲು ದೊಡ್ಡ ಸಾಧನ. ಮನಸ್ಸಿನ ಸ್ವಭಾವ ಏನು? ಹೊತ್ತುಗೊತ್ತಿನ ಪರಿವೆ ಇಲ್ಲದೆ ತನಗೆ ಇಷ್ಟ ಬಂದದ್ದನ್ನು ಬೇಕೆನಿಸುವಷ್ಟು ಹೊತ್ತು ಯೋಚಿಸುವ ಮತ್ತು ಚಿಂತಿಸುವ ಅಪ್ರತಿಮ ಸ್ವಾತಂತ್ರ್ಯವನ್ನು ಹೊಂದಿರುವುದೇ ಆಗಿದೆ. ಹಾಗಾಗಿ ನಾವು ಯಾವ ಕೆಲಸಕ್ಕೆ ತೊಡಗಿದರೂ ನಮ್ಮ ಅಪೇಕ್ಷೆಗನುಸಾರವಾಗಿ ಅದನ್ನು ದಕ್ಷವಾಗಿ ನಿರ್ವಹಿಸಲು ಮನಸ್ಸು ಅಡಚಣೆ ಉಂಟುಮಾಡುತ್ತಲೇ ಇರುತ್ತದೆ. ಇದನ್ನು ನಿವಾರಿಸುವ ಶಕ್ತಿ ಮತ್ತು ಉಪಾಯ ಧ್ಯಾನದಲ್ಲೇ ಅಡಕವಾಗಿದೆ