ಮಂಗಳೂರು : ಬಿಸಿ ರೋಡ್ ನಲ್ಲಿ ಹಿಂದೂ ಸಮಾಜದವರನ್ನು ಕೆಣಕುವ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಭಂಗ ತರಲು ಯತ್ನಿಸಿರುವ ಕಾಂಗ್ರೆಸ್‌ನ ಮಾಜಿ ಪುರಸಭೆ ಅಧ್ಯಕ್ಷ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ಕೂಡಲೇ ಬಂಧಿಸಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.
ಬಿ.ಸಿ. ರೋಡ್ ನಲ್ಲಿ ಕೋಮು ಗಲಭೆ ಸೃಷ್ಟಿಸುವುದಕ್ಕೆ ಯತ್ನಿಸಿರುವ ಕಾಂಗ್ರೆಸ್‌ನವರ ಕುತಂತ್ರವನ್ನು ಖಂಡಿಸಿರುವ ಕ್ಯಾ. ತೀವ್ರವಾಗಿ ಅವರು, ಈ ರೀತಿ ಹಿಂದೂ ಸಮಾಜದವರಿಗೆ ಸವಾಲು ಹಾಕಿ ರಾಷ್ಟ್ರ ವಿರೋಧಿ ಹಾಗೂ ಜಿಹಾದಿ ರೀತಿಯ ಹೇಳಿಕೆ ನೀಡುವವರ ವಿರುದ್ಧ ಕೇವಲ ಎಫ್‌ಐಆರ್ ದಾಖಲಿಸಿದರೆ ಸಾಲದು. ಸಮಾಜದಲ್ಲಿ ಶಾಂತಿ ಕದಡಿ ಕೋಮು ಭಾವನೆ ಕೆರಳಿಸುವುದಕ್ಕೆ ವಿಷಬೀಜ ಬಿತ್ತುವ ಇಂಥ ಮನಸ್ಥಿತಿಯವರನ್ನು ಮುಲಾಜಿಲ್ಲದೆ ಜೈಲಿಗೆ ಅಟ್ಟಬೇಕು. ಜತೆಗೆ ಇಂಥ ಕೋಮುವಾದಿ ಹೇಳಿಕೆ ಕೊಡಿಸಿ ಹಿಂದೂ ಮುಖಂಡರನ್ನು ಕೆರಳಿಸುವುದರ ಹಿಂದಿರುವ ದುಷ್ಟಶಕ್ತಿ ಬಗ್ಗೆ ತನಿಖೆ ನಡೆಸಿ ಅಂಥವರ ವಿರುದ್ದವೂ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿದ್ದಾರೆ.
ಬಿ.ಸಿ. ರೋಡ್, ಬಂಟ್ವಾಳ, ಮೆಲ್ಕಾರ್, ಸುತ್ತ-ಮುತ್ತಲಿನ ಪರಿಸರದಲ್ಲಿ ಅಕ್ರಮ ಮರಳುಗಾರಿಕೆ ಸೇರಿದಂತೆ ಹಲವು ರೀತಿಯ ಅಕ್ರಮ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದೆ. ಈ ರೀತಿಯ ಅಕ್ರಮ ಚಟುವಟಿಕೆಗಳೇ ಇಂಥ ಸಮಾಜ ಘಾತುಕರಿಗೆ ಅಶಾಂತಿ ಸೃಷ್ಟಿಸುವುದಕ್ಕೆ ಶಕ್ತಿ ನೀಡುತ್ತಿದೆ. ಹೀಗಾಗಿ, ಇಲ್ಲಿನ ಮರುಳು ದಂಧೆಗೆ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆ ಕೂಡಲೇ ಕಡಿವಾಣ ಹಾಕುವ ಜತೆಗೆ ಕಠಿಣ ಕ್ರಮ ಜರುಗಿಸಬೇಕೆಂದು ಕ್ಯಾ. ಚೌಟ ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.