ಬೆಂಗಳೂರು : ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಗುರುವಾರ ಜಾಮೀನು ಸಿಕ್ಕಿದೆ. ಆದರೂ ಅವರ ಸಂಕಷ್ಟ ಮುಂದು ವರೆಯಲಿದೆ.
ಜಾಮೀನು ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಶಾಸಕರು ಹೊರಬಂದ ಕೂಡಲೇ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲು ಕಾರಾಗೃಹದ ಪ್ರವೇಶ ದ್ವಾರದಲ್ಲೇ ರಾಮನಗರ ಜಿಲ್ಲೆ ಕಗ್ಗಲೀಪುರ ಠಾಣೆ ಪೊಲೀಸರು ಕಾದು ಕುಳಿತಿದ್ದಾರೆ
ನ್ಯಾಯಾಲವು ಶಾಸಕರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಸಾಕ್ಷ್ಯನಾಶಕ್ಕೆ ಯತ್ನಿಸಬಾರದು ಹಾಗೂ ಪೂರ್ವಾನುಮತಿ ಇಲ್ಲದೆ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗುವಂತಿಲ್ಲವೆಂದು ಶಾಸಕರಿಗೆ ಷರತ್ತು ವಿಧಿಸಿ 2 ಲಕ್ಷರು. ವೈಯಕ್ತಿಕ ಭದ್ರತಾ ಠೇವಣಿ ಪಡೆದು ನ್ಯಾಯಾಲಯವು ಜಾಮೀನು ನೀಡಿದೆ. ಆದರೆ ಜಾಮೀನು ಆದೇಶದ ಪ್ರತಿ ಕಾರಾಗೃಹ ಅಧಿಕಾರಿಗಳಿಗೆ ಲಭ್ಯವಾಗದ ಕಾರಣ ಗುರುವಾರ ರಾತ್ರಿವರೆಗೆ ಶಾಸಕರು ಜೈಲಿನಿಂದ ಬಂಧಮುಕ್ತರಾಗಿಲ್ಲ.
ಮತ್ತೊಂದು ಕೇಸಲ್ಲಿ ಬಂಧನಕ್ಕೆ ಸಜ್ಜು:
ಈ ಜಾಮೀನು ತೀರ್ಪು ಹಿನ್ನಲೆಯಲ್ಲೇ ಜೈಲಿನಿಂದ ಯಾವುದೇ ಕ್ಷಣದಲ್ಲಾದರೂ ಶಾಸಕರು ಹೊರಬರುವ ಸಾಧ್ಯತೆ ಮನಗಂಡು ಬುಧವಾರ ರಾತ್ರಿ ಮಹಿಳೆಯೊಬ್ಬರು ದಾಖಲಿಸಿರುವ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲು ಗುರುವಾರ ಮಧ್ಯಾಹ್ನವೇ ಜೈಲಿನ ಬಳಿಗೆ ಕಗ್ಗಲೀಪುರ ಠಾಣೆ ಪೊಲೀಸರು ಧಾವಿಸಿದ್ದಾರೆ.