ಬೆಂಗಳೂರು : ಬೇಕಾದರೆ ನಾನು ಶಾಸಕ ಸ್ಥಾನಕ್ಕೆ ಈಗಲೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಇಂತಹ ಮಾನಸಿಕ ಕಿರುಕುಳ ಬೇಡ. ಈಗಲೇ ರಾಜೀನಾಮೆ ಪತ್ರವನ್ನು ತೆಗೆದುಕೊಳ್ಳಿ ಸ್ವಾಮಿ…!’
ಅತ್ಯಾಚಾರ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಶಾಸಕ ಮುನಿರತ್ನ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅಲವತ್ತುಕೊಂಡಿದ್ದು ಹೀಗೆ….
ಗುತ್ತಿಗೆದಾರನಿಗೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದ ಬೆನ್ನಲ್ಲೇ ಮುನಿರತ್ನ ಅವರು ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದಾರೆ. ಈ ಮೂಲಕ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಕಗ್ಗಲೀಪುರ ಪೊಲೀಸರಿಂದ ಅತ್ಯಾಚಾರ ಆರೋಪದ ಮೇಲೆ ಬಂಧನಕ್ಕೊಳಗಾದ ಮುನಿರತ್ನ ಅವರನ್ನು ಶನಿವಾರನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು
ವಿಚಾರಣೆ ವೇಳೆ ನ್ಯಾಯಾಲಯ ಕೇಳಿದ ಕೆಲವು ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಮುನಿರತ್ನ, ಐದು ವರ್ಷದ ಬಳಿಕ ಪ್ರಕರಣ ಹೊರಬಂದಿದೆ. ಸಂತ್ರಸ್ತೆ ಈವರೆಗೆ ಯಾವ ಕಾರಣಕ್ಕಾಗಿ ಸುಮ್ಮನಿದ್ದರು ? ಅಂದೇ ದೂರು ನೀಡಬಹುದಿತ್ತಲ್ಲವೇ ? ಇದು ವ್ಯವಸ್ಥಿತ ರಾಜಕೀಯ ಷಡ್ಯಂತ್ರ ಎಂದು ನೋವಿನಿಂದ ನುಡಿದರು.
ಲೋಕಸಭೆಯ ಚುನಾವಣೆ ಫಲಿತಾಂಶ ಬಳಿಕ ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ಕೆಲವರಿಗೆ ಹಿನ್ನಡೆಯಾಗಿದ್ದಕ್ಕೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ನೆಮ್ಮದಿಯಾಗಿರುತ್ತೇನೆ ಎಂದರು.
ಈ ವೇಳೆ ನ್ಯಾಯಾಧೀಶರು, ಇದು ನ್ಯಾಯಾಲಯ ಎಂಬುದು ನಿಮ್ಮ ಗಮನದಲ್ಲಿರಲಿ, ನೀವು ರಾಜೀನಾಮೆಯನ್ನು ಯಾರಿಗೆ ಕೊಡಬೇಕೋ ಅವರಿಗೆ ಕೊಡಿ. ಕೇಳುತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಡಿ ಎಂದು ಸೂಚಿಸಿದರು.
ಆದರೂ ಮಾತು ಮುಂದುವರೆಸಿದ ಮುನಿರತ್ನ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವ್ಯವಸ್ಥಿತ ಷಡ್ಯಂತ್ರ ಇದಾಗಿದೆ. ನಾನು ಯಾವ ಮಹಿಳೆಯ ಮೇಲೂ ಅತ್ಯಾಚಾರ ನಡೆಸಿಲ್ಲ. ಸಾರ್ವಜನಿಕ ಜೀವನದಲ್ಲಿ ನನ್ನದೇ ಆದ ಘನತೆ ಇಟ್ಟುಕೊಂಡಿದ್ದೇನೆ. ಎಂದೂ ಇಂತಹ ನೀಚ ಕೆಲಸ ಮಾಡಲಿಲ್ಲ ನನ್ನ ಕ್ಷೇತ್ರದ ರಾಜಕೀಯ ಎದುರಾಳಿಗಳು ಕೆಲವು ಪ್ರಭಾವಿಗಳ ಜೊತೆ ಸೇರಿಕೊಂಡು ಇಂತಹ ಕುತಂತ್ರ ನಡೆಸಿದ್ದಾರೆ ಎಂದು ತಿಳಿಸಿದರು