ಶಿವಮೊಗ್ಗ : ಕೂಡಲಸಂಗಮದಲ್ಲಿ ಅ.20ರಂದು ನಡೆಯಲಿರುವ ಬೆಂಬಲಿಗರು, ಮುಖಂಡರ ಸಭೆಯಲ್ಲಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪನೆ ಕುರಿತು ಚರ್ಚೆ ನಡೆಸಲಾಗುವುದು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ ಆ ಸಭೆಯಲ್ಲಿ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ 2000 ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಸ್ವಾಮೀಜಿ ಹೇಳಿದಂತೆ ಚನ್ನಮ್ಮ ರಾಯಣ್ಣ ಹೆಸರುಗಳನ್ನು ಇಡಬೇಕೋ ಬೇಡವೋ ಎಂಬ ಕುರಿತು ನಿರ್ಧಾರ ಆಗಲಿದೆ ಎಂದರು.
ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಅವರು ನಾನು ಮತ್ತು ಶಾಸಕ ಯತ್ನಾಳ್ ಅವರು ಒಗ್ಗೂಡಿ ಚನ್ನಮ್ಮ ರಾಯಣ್ಣ ಬ್ರಿಗೇಡ್ ಮಾಡಲಿ ಎಂದು ಸಲಹೆ ನೀಡಿದ್ದರು. ರಾಯಣ್ಣ ಮತ್ತು ಚೆನ್ನಮ್ಮ ಒಟ್ಟಿಗೆ ರಕ್ತ ಹಂಚಿಕೊಂಡು ಹುಟ್ಟಿದ್ದಾರೆ. ಹೀಗಾಗಿ ಬ್ರಿಗೇಡ್ ಸ್ಥಾಪಿಸುವಂತೆ ಕೂಡಲಸಂಗಮ ಶ್ರೀಗಳು ಸಲಹೆ ನೀಡಿದ್ದರು ಎಂದರು.