ಬೆಂಗಳೂರು : ಕರ್ನಾಟಕ ರಾಜ್ಯದ ಅಪರಾಧ ಪ್ರಕರಣಗಳ ತನಿಖೆ ನಡೆಸಲು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಮುಕ್ತ ಅನುಮತಿ ನೀಡಿದ್ದ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಿಬಿಐಗೆ ನೀಡಿದ್ದ ಮುಕ್ತ ಅನುಮತಿ ಹಿಂಪಡೆಯಲಾಗಿದೆ. ಇದರಿಂದಾಗಿ ಕರ್ನಾಟಕದ ಭೂಭಾಗದ ಒಳಗೆ ನ್ಯಾಯಾಲಯದ ಆದೇಶ ಅಥವಾ ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸುವ ಅಧಿಕಾರವನ್ನು ಸಿಬಿಐ ಕಳೆದುಕೊಳ್ಳಲಿದೆ.
ಮುಖ್ಯಮಂತ್ರಿಗಳ ವಿರುದ್ಧದ ಮುಡಾ ಪ್ರಕರಣ ಹಾಗೂ ವಾಲ್ಮೀಕಿ ನಿಗಮದ ಹಗರಣಗಳು ಚರ್ಚೆಯಲ್ಲಿರುವಾಗಲೇ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ.
ಸಂಪುಟದ ನಿರ್ಧಾರವನ್ನು ಸಮರ್ಥಿಸಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಎಚ್.ಕೆ.ಪಾಟೀಲ್, ‘ನಾವು ಭಯದಿಂದ ಈ ತೀರ್ಮಾನ ಮಾಡಿಲ್ಲ. ಭಯ ಉತ್ಪಾದಿಸಲು ಯತ್ನಿಸುತ್ತಿರುವವರನ್ನು ನಿಗ್ರಹಿಸಲು ಈ ನಿರ್ಧಾರ ಮಾಡಿದ್ದೇವೆ. ಇದು ಭಯೋತ್ಪಾದನಾ ನಿಗ್ರಹ ನಡೆ. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಕೇಂದ್ರದ ಅಂಗ ಸಂಸ್ಥೆಗಳು ‘ಹಾಗೂ ರಾಜಭವನ ಕೆಲಸ ಮಾಡುತ್ತಿವೆ. ಇದಕ್ಕೆ ಉತ್ತರವಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.