36. ನಿಜವಾದ ಸುಖ
ಮನಸ್ಸಿನ ಏಕಾಗ್ರತೆಯನ್ನು ಸಾಧಿಸುವ ಮೂಲಕ ನಾವು ಮೂಲಭೂತವಾಗಿ ಮಾಡಲು ಸಾಧ್ಯವಾಗುವುದು ಮನಸ್ಸನ್ನು ನಿಶ್ಚಲಗೊಳಿಸುವುದು. ಮನಸ್ಸನ್ನು ನಿಶ್ಚಲಗೊಳಿಸಿದಾಗ ನಮಗೆ ಆಗುವ ಅನುಭವವೇನು? ಇದನ್ನು ನಾವು ಒಂದು ಸಣ್ಣ ಉದಾಹರಣೆಯ ಮೂಲಕ ತಿಳಿಯಬಹುದು. ಎಷ್ಟೋ ವೇಳೆ ನಾವು ರಾತ್ರಿ ಹಲವಾರು ತಾಸುಗಳ ಕಾಲ ಮಲಗಿದರೂ ನಮಗೆ ಸುಖವಾದ ನಿದ್ರೆ ಅನುಭವಕ್ಕೆ ಬಂದೇ ಇರುವುದಿಲ್ಲ. ನಿದ್ರೆಯಲ್ಲಿ ಅದೆಷ್ಟೋ ಕನಸುಗಳನ್ನು ನಾವು ಕಾಣುತ್ತೇವೆ. ಈ ಕನಸುಗಳನ್ನು ಕಾಣುವ ಪ್ರಕ್ರಿಯೆಯಲ್ಲಿ ಮನಸ್ಸು ಸಂಪೂರ್ಣವಾಗಿ ಕ್ರಿಯಾಶೀ¯ವಾಗಿರುತ್ತದೆ. ಪರಿಣಾಮವಾಗಿ ಮನಸ್ಸನ್ನು ನಿದ್ರೆಯಲ್ಲೂ ಬಳಲಿಕೆಯನ್ನೂ ಅನುಭವಿಸುತ್ತದೆ. ಹಾಗಾಗಿ ಸುಖವಾದ ನಿದ್ರೆಯನ್ನು ನಾವು ಅನುಭವಿಸಲಾರೆವು. ಮನಸ್ಸು ನಿಶ್ಚಲವಾಗದೆ ಸುಖದ ಅನುಭವ ಉಂಟಾಗದು. ಕೆಲವೊಮ್ಮೆ ನಾವು ಕೇವಲ ಹತ್ತಿಪ್ಪತ್ತು ನಿಮಿಷಗಳ ಕಾಲ ನಿದ್ರಿಸಿದರೂ ಗಾಢನಿದ್ರೆಯ ಸುಖವನ್ನು ಅನುಭವಿಸಿರುತ್ತೇವೆ. ಆ ಇಪ್ಪತ್ತು ನಿಮಿಷಗಳ ನಿದ್ರೆಯೂ ನಮಗೆ ಹಲವಾರು ಗಂಟೆಗಳ ನಿದ್ರೆಯ ಅನುಭವವನ್ನು ನೀಡಿರುತ್ತೇವೆ. ಆ ಅಪೂರ್ವವಾದ ಸುಖಾನುಭವಕ್ಕೆ ನಾವೇ ಬೆರಗಾಗುತ್ತೇವೆ. ಈ ಅನುಭವ ನಮಗೆ ಏನನ್ನು ತಿಳಿಸುತ್ತದೆ? ನಮಗೆ ಏನೆಂದೂ ತಿಳಿಯದ ಹಾಗೆ ಅನುಭವಿಸಿದ ನಿದ್ರೆಯಲ್ಲಿ ನಾವು ವಿಶಿಷ್ಟವಾದ ಸುಖವನ್ನು ಅನುಭವಿಸಿದೆವು! ಎಂದರೆ ಏನರ್ಥ? ನಿಜವಾದ ಸುಖವೆಂದರೆ ಅದರ ಯಾವ ಸೂಕ್ಷ್ಮಗಳೂ ನಮ್ಮ ಪಂಚೇಂದ್ರಿಯಗಳ ಅನುಭವಕ್ಕೆ ಬರದಂತಹ ಸ್ಥಿತಿ !