ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜಾಮೀನು ಕೋರಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಬೆಂಗಳೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸೆ.30ಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಪವಿತ್ರಾಗೌಡ, ದರ್ಶನ್, ಪವನ್, ಲಕ್ಷ್ಮಣ್, ನಾಗರಾಜ್, ರವಿ ಶಂಕರ್ ಮತ್ತು ವಿನಯ್ ಸಲ್ಲಿಸಿದ್ದ ಜಾಮೀನು ಅರ್ಜಿಗಳು ಶುಕ್ರವಾರ ನಗರದ 57ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿದ್ದವು. ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ತಿಳಿಸಿ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದರು.
ಇದರಿಂದ ದರ್ಶನ್ ಪರ ವಕೀಲರು, ಸರ್ಕಾರಿ ಅಭಿಯೋಜಕರ ಆಕ್ಷೇಪಣೆಗಳ ಪರಿಶೀಲಿಸಿ ವಾದ ಮಂಡಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಮನವಿ ಒಪ್ಪಿದ ನ್ಯಾಯಾಲಯವು ಅರ್ಜಿಗಳ ವಿಚಾರಣೆ ಸೆ.30ಕ್ಕೆ ಮುಂದೂಡಿತು.
ಪವಿತ್ರಾಗೆ ಜಾಮೀನು ನೀಡಿ :
ಈ ನಡುವೆ ಪ್ರಕರಣದ ಮೊದಲ ಆರೋಪಿಯಾಗಿರುವ ಪವಿತ್ರಾಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿ, ರೇಣುಕಾ ಸ್ವಾಮಿ ಹತ್ಯೆಯಲ್ಲಿ ಪವಿತ್ರಾ ಗೌಡ ಪಾತ್ರವಿಲ್ಲ. ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಪ್ರಕರಣದ ಇತರೆ ಆರೋಪಿಗಳು ರೇಣುಕಾಸ್ವಾಮಿಯನ್ನು ನಗರಕ್ಕೆ ಕರೆದುಕೊಂಡು ಬಂದಿದ್ದರು. ದರ್ಶನ್ ಅವರೊಂದಿಗೆ ಪವಿತ್ರಾ ಪಟ್ಟಣಗೆರೆ ಶೆಡ್ಗೆ ಹೋಗಿರುವ ಬಗ್ಗೆ ಸಾಕ್ಷಿದಾರರು ಹೇಳಿಕೆ ನೀಡಿದ್ದಾರೆಯೇ ಹೊರತು ಹತ್ಯೆ ಮಾಡಿದ್ದಾರೆ ಎಂದು ಹೇಳಿಲ್ಲ. ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷ ಸಾಕ್ಷಿಗಳು, ರೇಣುಕಾಸ್ವಾಮಿಗೆ ಪವಿತ್ರಾ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದರು ಎಂದು ಹೇಳಿಕೆ ನೀಡಿದ್ದಾರೆ. ಹೊಡೆದ ಮಾತ್ರಕ್ಕೆ ಕೊಲೆ ಮಾಡಿದಂತೆ ಆಗುವುದಿಲ್ಲ. ಆದ್ದರಿಂದ ಆಕೆಗೆ ಜಾಮೀನು ನೀಡುವಂತೆ ಕೋರಿದರು.