ಬೆಂಗಳೂರು : ಸಿದ್ದರಾಮಯ್ಯ ಸರ್ಕಾರದಲ್ಲಿ ಶೇ.40ಕ್ಕಿಂತಲೂ ಅಧಿಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅದೇ ಪಕ್ಷದವರು ಹೇಳುತ್ತಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ಲೂಟಿ ಮಾಡುತ್ತಿದ್ದಾರೆ. ನನ್ನ ಬಳಿ ಇರುವ ದಾಖಲೆಗಳನ್ನು ಬಯಲು ಮಾಡಿದರೆ ಕೊನೇ ಪಕ್ಷ 6 ರಿಂದ 7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಶೀಘ್ರದಲ್ಲಿಯೇ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ನಗರದ ಜೆಪಿ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕರ್ನಾಟಕದ ರಾಜಕಾರಣ ಹಿಂದೆಂದೂ ಈ ರೀತಿಯ ಬಿಸಿ ನೋಡಿರಲಿಲ್ಲ. ಕಾಂಗ್ರೆಸ್ ಬಂದ ಮೇಲೆ, ಆಡಳಿತವನ್ನು ಯಾವ ರೀತಿ ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಕೆಳಹಂತಕ್ಕೆ ಇಳಿದು ಸರ್ಕಾರದ ಆದೇಶದ ಪಾಲನೆ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಹೊಸ ರೀತಿಯ ಕಾರ್ಯವೈಖರಿಯೇ ಪ್ರಾರಂಭವಾಗಿದೆ ಈ ಸರ್ಕಾರ, ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಕಾಲವೇ ನಿರ್ಣಯ ಮಾಡಬೇಕು ಎಂದು ಹೇಳಿದರು.