ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅ.3 ರಂದು ಬೆಳಗ್ಗೆ 9.15 ರಿಂದ 9.45 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ ಪ್ರೊ.ಹಂಪನಾಗರಾಜಯ್ಯ ಚಾಲನೆ ನೀಡುವರು. ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಅ.12 ರಂದು ನಡೆಯಲಿದೆ. ಅಂದು ಮಧ್ಯಾಹ್ನ 1.41 ರಿಂದ 2.10 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಸಿಎಂ ಸಿದ್ದರಾಮಯ್ಯ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವರು. ಸಂಜೆ 4 ರಿಂದ 4.30 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವರು. ಡಿಸಿಎಂ ಡಿ.ಕೆ.ಶಿವಕುಮಾರ್, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸುವರು. ಅದೇ ದಿನ ಸಂಜೆ 7.00ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದೆ.