ಮೈಸೂರು : ಜಾತಿಗಣತಿಯ ವರದಿ ನನ್ನ ಕೈ ಸೇರಿದೆ. ಶೀಘ್ರವೇ ಅದನ್ನು ಜಾರಿಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸ ಲಾಗಿದ್ದ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿ ನನ್ನ ಕೈ ಸೇರಿದೆ. ನಾನು ಇನ್ನೂ ಅದನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿಲ್ಲ ಹಲವು ಕಾರಣದಿಂದ ಆ ವರದಿ ಇನ್ನೂ ಜಾರಿಯಾಗಿಲ್ಲ ಮುಂದಿನ ದಿನಗಳಲ್ಲಿ ಅದನ್ನು ನೋಡಿ ಸಚಿವ ಸಂಪುಟದಲ್ಲಿಟ್ಟು ಚರ್ಚಿಸಿ, ನಂತರ ಅದನ್ನು ಜಾರಿಗೆ ತರುತ್ತೇನೆ. ವರದಿಯಲ್ಲಿಯಲ್ಲಿರುವ ಶಿಫಾರಸುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಜಾತಿ – ಆಧಾರಿತ ಜನಗಣತಿ ಜಾರಿ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಸೂಚಿಯಾಗಿದೆ. ಹೀಗಾಗಿ ನಾನು ಜಾತಿ ಗಣತಿ ವರದಿಯನ್ನು ಜಾರಿ ಮಾಡಿಯೇ ಮಾಡುತ್ತೇನೆ ಎಂದು ಘೋಷಿಸಿದರು. ಸೌಲಭ್ಯ ವಂಚಿತರನ್ನು ಗುರುತಿಸಲೆಂದೇ ಗಣತಿ ನಡೆಸಲಾಗಿದೆ. ಜಾತಿ ಜನಗಣತಿ ಕಾಂಗ್ರೆಸ್ ಪಕ್ಷದ ಸಿದ್ಧಾಂತವೂ ಆಗಿದೆ ಎಂದರು