ಉಡುಪಿ : ಪಕ್ಷದ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಜಿಲ್ಲೆ.ಸದಸ್ಯತಾ ಅಭಿಯಾನದಲ್ಲಿ ಪಕ್ಷದ ರಾಷ್ಟ್ರ,ರಾಜ್ಯ ನಾಯಕರು ನಿಗದಿಪಡಿಸಿರುವ ಗುರಿ ಮುಟ್ಟುವ ತನಕ ವಿರಮಿಸದಿರಿ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಭಾ ಕರೆ ನೀಡಿದರು.
ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಸದಸ್ಯತಾ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಸೆ.2ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡಿರುವ ಬಿಜೆಪಿ ಸದಸ್ಯತಾ ಅಭಿಯಾನ ದೇಶದಾದ್ಯಂತ ವೇಗ ಪಡೆದಿದೆ.ಪಕ್ಷದ ಕಾರ್ಯಕರ್ತರು ಪ್ರತೀ ದಿನ 2 ತಾಸು ಸಮಯ ನೀಡಿ ಯೋಜನಾ ಬದ್ಧವಾಗಿ ಬೂತ್ ವ್ಯಾಪ್ತಿಯ ಮನೆ ಮನೆ ಭೇಟಿ ನಡೆಸುವ ಜೊತೆಗೆ ಪ್ರಧಾನಿ ಮೋದಿ ಅಭಿಮಾನಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡಾಗ ಗುರಿ ತಲುಪಲು ಸುಲಭ ಸಾಧ್ಯ.
ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳ ಸಹಕಾರದೊಂದಿಗೆ ಸಂಘಟಿತ ಪ್ರಯತ್ನದ ಮೂಲಕ ನಿಗದಿತ ಅವಧಿಯಲ್ಲಿ ನಿಶ್ಚಿತ ಗುರಿಯನ್ನು ತಲುಪಬೇಕು ಎಂದು ಅವರು ತಿಳಿಸಿದರು.ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಮಾಜಿ ಸಚಿವ ಭಗವಂತ ಖೂಭಾ ಅವರನ್ನು ಶಾಲು ಹೊದೆಸಿ ಸನ್ಮಾನಿಸಿ ಮಾತನಾಡಿ, ಕಳೆದ ಒಂದು ವಾರದಿಂದ ಸದಸ್ಯತಾ ಅಭಿಯಾನ ಜಿಲ್ಲೆಯಾದ್ಯಂತ ವೇಗ ಪಡೆದಿದೆ ಎಂದರು
ಸದಸ್ಯತಾ ಅಭಿಯಾನದ ಜಿಲ್ಲಾ ಸಂಚಾಲಕ ಮಟ್ಟಾರ್ ರತ್ನಾಕರ ಹೆಗ್ದೆ ಮತ್ತು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ಸದಸ್ಯತಾ ಅಭಿಯಾನಕ್ಕೆ ವೇಗ ನೀಡುವ ಕುರಿತು ಮಾರ್ಗದರ್ಶನ ನೀಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಸೇವಾ ಪಾಕ್ಷಿಕ ಅಭಿಯಾನದ ಅ.2ರ ಗಾಂಧಿ ಜಯಂತಿ ಪ್ರಯುಕ್ತ ಪಕ್ಷದ ವತಿಯಿಂದ ನಡೆಯುವ ಸ್ವಚ್ಛತಾ ಕಾರ್ಯಕ್ರಮಗಳ ಮಾಹಿತಿ ನೀಡಿ, ಸೆ.29ರಂದು ನಡೆದ ‘ಮನ್ ಕೀ ಬಾತ್’ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಮತ್ತು ವರದಿ ಅಪ್ಲೋಡ್ ಕುರಿತು ಮಂಡಲವಾರು ಪ್ರಗತಿಯ ವರದಿ ಮಂಡಿಸಿದರು.