ಬೆಂಗಳೂರು : ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೆ ‘ಗಾಂಧಿ ನಡಿಗೆ’ ಹೆಸರಿನಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು.
ಬಳಿಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಝೂಮ್ ಆ್ಯಪ್ ಮೂಲಕ ಭಾಗವಹಿಸಿದ್ದ 3 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ‘ಸ್ವಚ್ಛತಾ ಆಂದೋಲನದ ಪ್ರತಿಜ್ಞಾವಿಧಿ’ ಬೋಧಿ ಸುವ ಮೂಲಕ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಮೊದಲು ಬುಧವಾರ ಬೆಳಗ್ಗೆ ಗಾಂಧಿ ಭವನದ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಗಾಂಧಿ ಭವನದಿಂದ ಪ್ರಾರಂಭವಾಗಿ ಶಿವಾನಂದ ವೃತ್ತ, ರೇಸ್ ಕೋರ್ಸ್ ವೃತ್ತ, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ, ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಗಾಂಧಿ ಪ್ರತಿಮೆ ಬಳಿಯವರೆಗೆ ಸುಮಾರು 1 ಕಿ.ಮೀ. ಸಾಗಿ ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಜಾಥಾ ಸಾಗಿದ ದಾರಿಯುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿ ಗಾಂಧೀಜಿ ಅವರ ಸಂದೇಶ ಹಾಗೂ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.