ಉಡುಪಿ : ಕರ್ನಾಟಕ ರಾಜ್ಯದ ಸರಿ ಸುಮಾರು 6,000 ದಷ್ಟು ಗ್ರಾಮ ಪಂಚಾಯತಿಗಳ ಆಡಳಿತ ವ್ಯವಸ್ಥೆ ಸಿಬ್ಬಂದಿಗಳ ಮುಷ್ಕರದಿಂದಾಗಿ ಸ್ಥಗಿತ ಆಗಿದೆ. ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು, ನೀರು ಸರಬರಾಜು ಸಿಬ್ಬಂದಿಗಳು, ಸ್ವಚ್ಛತಾ ಕಾರ್ಯಕರ್ತರ ಸಹಿತ ಇಡೀ ಪಂಚಾಯತಿಯ ಕಾರ್ಯಾಂಗ ಕೆಲಸವನ್ನು ಸ್ಥಗಿತಗೊಳಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿದಂತೆ, ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಪಂಚಾಯತ್ ನ ಸಣ್ಣಪುಟ್ಟ ಕೆಲಸವು ಆಗದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಸಾಮಾನ್ಯ ಸಭೆಗಳು ನಡೆಯದೆ ಸ್ಥಳೀಯಾಡಳಿತದಿಂದ ಸಿಗಬೇಕಾದ ಪರವಾನಿಗೆಗಳು, ನೀರು ಸರಬರಾಜು, ತೆರಿಗೆ ಸಂಗ್ರಹ ವ್ಯವಸ್ಥೆಗಳಿಂದ ಜನಸಾಮಾನ್ಯರು ವಂಚಿತರಾಗುತ್ತಿದ್ದಾರೆ. ಇಷ್ಟೆಲ್ಲಾ ನಡೆದು ವಾರಗಟ್ಟಲೆ ಪಂಚಾಯತ್ ರಾಜ್ ಆಡಳಿತ ಸ್ಥಗಿತವಾಗಿದ್ದರೂ ಸರ್ಕಾರ ಮೌನ ವಹಿಸುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ತಾವು ಮಧ್ಯಪ್ರವೇಶಿಸಿ, ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಸಿಬ್ಬಂದಿಗಳ ಸಂಘಟನೆಯ ಮುಖಂಡರನ್ನು ಕರೆದು ಸಮಸ್ಯೆ ಬಗೆಹರಿಸಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.