ಮುಂಬೈ : ಭಾರತದ ಅತಿದೊಡ್ಡ ಸಮೂಹ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಹಾಗೂ ದೇಶ-ವಿದೇಶಗಳಲ್ಲಿ ಉದ್ಯಮ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದ ರತನ್ ಟಾಟಾ (86ವರ್ಷ) ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ ಟಾಟಾ ಸಮೂಹ ಸಂಸ್ಥೆ ಬುಧವಾರ ತಡರಾತ್ರಿ 11.50ಕ್ಕೆ ಇದರ ಅಧಿಕೃತ ಘೋಷಣೆ ಮಾಡಿದೆ.
ಸೋಮವಾರವೇ ಟಾಟಾ ಆರೋಗ್ಯ ಹದಗೆಟ್ಟಿದೆ ಎಂದು ವರದಿಯಾಗಿತ್ತು. ಆದರೆ ಟಾಟಾ ಅವರು ‘ನಾನು ಸ್ವಸ್ಥನಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು ವಯೋಸಹಜ ಕಾಯಿಲೆಗಳು ಹಾಗೂ ಇತರ ವೈದ್ಯಕೀಯ ಸಮಸ್ಯೆಗಳ ಕಾರಣ ವಾಡಿಕೆಯ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದರು ಹಾಗೂ ‘ಉತ್ಸಾಹದಿಂದ ಇದ್ದೇನೆ’ ಎಂದು ದೇಶವಾಸಿಗಳಲ್ಲಿ ಧೈರ್ಯ ತುಂಬಿದ್ದರು
ಆದರೆ ಬುಧವಾರ ಸಂಜೆ ಅವರ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಮತ್ತೆ ಹರಿದಾಡಿತ್ತು. ಆದರೆ ಯಾರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಇದಾದ ಕೆಲವು ಗಂಟೆಗಳ ಬಳಿಕ ಬುಧವಾರ ಮಧ್ಯ ರಾತ್ರಿ ಅವರ ಸಾವಿನ ಘೋಷಣೆ ಹೊರಬಿದ್ದಿದೆ. ಟಾಟಾ ಅವರ ನಿಧನಕ್ಕೆ ಗಣ್ಯರು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಂತಾಪದ ಸುರಿಮಳೆಯೇ ಹರಿದು ಬಂದಿದೆ. ಟಾಟಾ ಅವರು 1991ರಲ್ಲಿ ಟಾಟಾ ಸ್ಟೀಲ್ ಸಮೂಹಕ್ಕೆ ಅಧ್ಯಕ್ಷರಾಗಿದ್ದರು ಮತ್ತು 100 ವರ್ಷಗಳ ಹಿಂದೆ ತಮ್ಮ ಮುತ್ತಜ್ಜ ಸ್ಥಾಪಿಸಿದ ಸಂಸ್ಥೆಯನ್ನು 2012 ರವರೆಗೆ ನಡೆಸುತ್ತಿದ್ದರು