ಬೆಂಗಳೂರು : ಮುಡಾ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುತ್ತಿಕೊಳ್ಳುತ್ತಿರುವಾಗಲೇ, ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಹಲವು ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಅದರಲ್ಲೂ ಸಿದ್ದರಾಮಯ್ಯ ಪಾಳಯದಲ್ಲಿ ಹಲವಾರು ಲೆಕ್ಕಾಚಾರಗಳು ಶುರುವಾಗಿದ್ದು, ಮುಂದಿನ ರಾಜಕೀಯ ನಡೆಗಳು ತೀವ್ರ ಕುತೂಹಲ ಕೆರಳಿಸಿವೆ. ಸಿದ್ದು ಆಪ್ತ ಸತೀಶ್ ಜಾರಕಿಹೊಳಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಹಲವು ನಾಯಕರನ್ನು ಭೇಟಿ ಮಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಮುಡಾ ಸೈಟ್ ಹಗರಣದಲ್ಲಿ ಸಿಲುಕಿದಾಗಿನಿಂದ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಕುರ್ಚಿ ಮೇಲೆ ಟವೆಲ್ ಹಾಕುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಮುಡಾ ತನಿಖೆ ತೀವ್ರಗೊಂಡಷ್ಟೂ ಸಿ ಎಂ ಬದಲಾವಣೆ ವಿಚಾರದ ಚರ್ಚೆ ಹೆಚ್ಚಾಗುತ್ತಿದೆ. ಇದು ದಿನಕ್ಕೊಂದು ತಿರುವು ಪಡೆಯುತ್ತಿದ್ದು ಮುಂದೇನಾಗಬಹುದು ಎನ್ನುವುದನ್ನು ಯಾರಿಗೂ ಅಂದಾಜು ಮಾಡಲು ಆಗುತ್ತಿಲ್ಲ ಮತ್ತೊಂದೆಡೆ ಸಿಕ್ಕಿದ್ದೇ ಅವಕಾಶ ಎಂದು ಸಿಎಂ ರಾಜೀನಾಮೆಗೆ ಬಿಜೆಪಿ ಪಟ್ಟುಹಿಡಿದಿದೆ.