- ಮೌನಕ್ಕಿರುವ ಶಕ್ತಿ
ಮನಸ್ಸಿನ ಶಕ್ತಿಯ ಅತ್ಯಧಿಕ ಪಾಲು ದಿನನಿತ್ಯವೂ ಅಪವ್ಯಯವಾಗುವುದೇ ಹೆಚ್ಚು ಅನಗತ್ಯ ಹರಟೆಯ ಮೂಲಕ ಮಾತಿನ ರೂಪದಲ್ಲಿ ಮನಸ್ಸನ್ನು ಗೊಂದಲಪುರ ಮಾಡಿಕೊಳ್ಳುವ ದುರಭ್ಯಾಸ ನಮ್ಮದು. ನಮಗರಿವಿಲ್ಲದಂತೆಯೇ ನಾವದನ್ನು ರೂಢಿಸಿ ಕೊಂಡಿದ್ದೇವೆ. ಮಾತು ಕೇವಲ ಹರಟೆಯಾದಾಗ ಅದರ ಫಲಿತಾಂಶದಲ್ಲಿ ಸರಸಕ್ಕಿಂತ ವಿರಸದ ಪಾಲೇ ಹೆಚ್ಚು. ಮಾತು ಅತಿಯಾದಾಗ ಸಂಭವಿಸುವುದು ಅನರ್ಥವಲ್ಲದೆ ಬೇರೇನೂ ಅಲ್ಲ. ಮಾತು ಬೆಳ್ಳಿಯಾದರೆ ಮೌನ ಬಂಗಾರ ಎನ್ನುವುದು ಇದೇ ಕಾರಣಕ್ಕೆ. ‘ಮಾತಿನಿಂ ನಗೆನುಡಿಯು, ಮಾತಿನಿಂ ಹಗೆ ಹೊಗೆಯು…….’ ಎಂಬ ಎಚ್ಚರಿಕೆಯನು ಸರ್ವಜ್ಞನು ನೀಡಿಲ್ಲವೆ? ‘ಮಾತೇ ಮಾಣಿಕ್ಯ’ ಎನ್ನುವ ಸರ್ವಜ್ಞನ ನುಡಿಯಲ್ಲಿ ಮಾತಿನ ಮಹತ್ವವೂ ಇದೆ. ವ್ಯರ್ಥ ಮಾತಿನಿಂದಾಗುವ ದುರಂತದ ಎಚ್ಚರಿಕೆಯೂ ಇದೆ. ಇದಕ್ಕಾಗಿಯೇ ಅನಗತ್ಯ ಹರಟೆಯ ಮಾತಿನಿಂದ ಮನೋಶಕ್ತಿ ಅಪವ್ಯಯವಾಗುವುದನ್ನು ತಡೆಯುವಾಗ ಮಾರ್ಗೋಪಾಯವನ್ನು ಅನುಸರಿಸುವುದು ಅಗತ್ಯ. ಇದಕ್ಕೆ ಧ್ಯಾನವೇ ಪ್ರಧಾನ ಅಸ್ತ್ರ. ಕ್ರಮಬದ್ಧ ಧ್ಯಾನದಿಂದ ಸಿದ್ಧಿಸುವ ಮೌನ ಧಾರಣೆಯ ಶಿಸ್ತಿನಲ್ಲಿ ಮನಸ್ಸಿನ ಶಕ್ತಿ ಅಪವ್ಯಯವಾಗುವುದನ್ನು ತಡೆಯಬಹುದು. ಮನಸ್ಸಿನ ಮೇಲೆ ಸದಾ ದಾಳಿ ಇಡುವ ಆಲೋಚನೆಗಳು ನಮ್ಮೆಲ್ಲ ಕಾಮನೆಗಳ, ಬೇಕು – ಬೇಡಗಳ ಪರಿಣಾಮವಾಗಿಯೇ ಇವೆ. ಖ್ಯಾತಿ, ಜನ ಪ್ರಿಯತೆ, ಅಂತಸ್ತು, ಸಿರಿ – ಸಂಪತ್ತು, ಸ್ವಜನ ವ್ಯಾಮೋಹ ಇತ್ಯಾದಿಗಳಿಂದಕೇ ತುಂಬಿರುವ ಮನಸ್ಸು ಇವುಗಳು ಸೃಷ್ಟಿಸುವ ಕಾಮನೆಗಳಿಂದಲೇ ಉದ್ವಿಗ್ನವಾಗಿರುತ್ತದೆ. ಇದನ್ನು ನಿವಾರಿಸುವ,ಸರಳೋಪಾಯ ಮನಸ್ಸನ್ನು ‘ನಿಶ್ಚಲ’ ಗೊಳಿಸುವ ಧ್ಯಾನದಲ್ಲಿ ಇದೆ. ಧ್ಯಾನದ ಮೂಲಕ ನಿತ್ಯ ಬದುಕಿನಲ್ಲಿ ಮನಸ್ಸಿನ ಉದ್ವಿಗ್ನತೆಯನ್ನು ನಿವಾರಿಸುವ, ಏಕಗ್ರತೆಯನ್ನು ಉಳಿಸಿಕೊಳ್ಳುವ ಹಾಗೂ ಸಂತುಲನವನ್ನು ಕಾಯ್ದುಕೊಳ್ಳುವ ಅಮೂಲ್ಯವಾದ ಶಕ್ತಿಯನ್ನು ಪಡೆಯಬಹುದಾಗಿದೆ .