ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ವಾದ-ಪ್ರತಿವಾದ ಬಳಿಕ ಜಾಮೀನು ತೀರ್ಪು ಕಾಯ್ದಿರಿಸಿದ ನ್ಯಾಯಾಲಯವು ಮಂಗಳವಾರ ಆದೇಶ ಹೊರಡಿಸಿದೆ.
ಒಂದು ಲಕ್ಷ ರು. ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೌಲ್ಯದ ಇಬ್ಬರ ಭದ್ರತೆ ಒದಗಿಸಬೇಕು. ಆರೋಪಿ ಮುನಿರತ್ನ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ತನಿಖೆ ಸಹಕರಿಸಬೇಕು ಮತ್ತು ಸಾಕ್ಷ್ಯ ತಿರುಚುವ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಲಾಗಿದೆ.
ಅಲ್ಲದೆ, ಮೂರು ತಿಂಗಳವರೆಗೆ ಪ್ರತಿ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5ರ ನಡುವೆ ಸಂಬಂಧಿತ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕು. ನ್ಯಾಯಾಲಯದ ಅನುಮತಿ ಪಡೆಯದೇ ಅರ್ಜಿದಾರರು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗು ವಂತಿಲ್ಲ ಎಂದು ಸೂಚನೆ ನೀಡಿದೆ.
ಇದೇ ಪ್ರಕರಣದಲ್ಲಿ ಇತರೆ ಆರೋಪಿ ಗಳಾದ ಡಿ.ವಿಜಯ್ ಕುಮಾರ್, ಪಿ. ಶ್ರೀನಿವಾಸ, ಆರ್.ಸುಧಾಕರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದು, ಮುನಿರತ್ನಗೆ ವಿಧಿಸಿರುವ ಷರತ್ತುಗಳು ಅನ್ವಯಿಸಲಿವೆ ಎಂದು ನ್ಯಾಯಾಲಯ ತಿಳಿಸಿದೆ. ಮಂಗಳವಾರ ಆರೋಪಿಗಳಾದ ಲೋಹಿತ್, ಕಿರಣ್ ಮತ್ತು ಮಂಜುನಾಥ್ ಗೆ ನಿರೀಕ್ಷಣಾ ಜಾಮೀನು ನೀಡಲಾಗಿತ್ತು. ಸಾಮಾಜಿಕ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಗ್ಗಲಿಪುರ ಠಾಣೆಯಲ್ಲಿ ಮುನಿರತ್ನ ಸೇರಿ ಆರು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ ಮುನಿರತ್ನ ಅವರನ್ನು ಬಂಧಿಸಲಾಗಿತ್ತು