ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಹಿನ್ನೆಲೆಯಲ್ಲಿ ಇ.ಡಿ. (ಚಾರಿ ನಿರ್ದೇಶನಾಲಯ) ಅಧಿಕಾರಿಗಳು ಮುಡಾ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆ ಆರಂಭಿಸಿದ್ದಾರೆ
ಈ ವೇಳೆ ನಮಗೆ ಪಾರ್ವತಿ ಸಿದ್ದರಾಮಯ್ಯ ಅವರಿಗೆ ನಿವೇಶನ ಹಂಚಿಕೆ ಮಾಡಿದ ಬಗ್ಗೆ ಮೂಲ ದಾಖಲಾತಿ ಕೊಡಿ ಎಂದು ಇ.ಡಿ. ಅಧಿ ಕಾರಿಗಳು ಮುಡಾ ಆಯುಕ್ತರ ಬಳಿ ಕೇಳಿದ್ದಾರೆ. ಅಲ್ಲದೆ ಪಾರ್ವತಿ ಸಿದ್ದರಾಮಯ್ಯ ಅವರು ಬದಲಿ ನಿವೇಶನ ಕೋರಿ ಬರೆದ ಪತ್ರದಲ್ಲಿ ಕೆಲ ಪದಗಳನ್ನು ವೈಟ್ನರ್ ಹಾಕಿ ಅಳಿಸಿದ್ದು ಯಾರು ? ಯಾವ ಪದಗಳನ್ನು ಅಳಿಸಲಾಗಿದೆ ಎಂದೂ ಇ.ಡಿ. ಅಧಿಕಾರಿಗಳು ಮಾಹಿತಿ ಕೋರಿದ್ದಾರೆ. ಈ ಬಗ್ಗೆ ಮುಡಾ ಅಧಿಕಾರಿಗಳು ದಾಖಲೆಗಳ ಹುಡುಕಾಟ ಆರಂಭಿಸಿದ್ದಾರೆ
ಮುಡಾದಲ್ಲಿ 5 ಸಾವಿರ ಕೋಟಿ ರೂಪಾಯಿ ಅಕ್ರಮ ನಡೆದಿದೆ. 50:50 ಅನುಪಾತದಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಹೆಸರಿಗೂ ನಿವೇಶನ ಮಂಜುರಾಗಿದ್ದು, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಇ.ಡಿ.ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.