ಬೆಂಗಳೂರು : ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಪೈಕಿ ಶಿಗ್ಗಾಂವ್, ಸಂಡೂರು ಕ್ಷೇತ್ರಗಳಿಗೆ ಎನ್ಡಿಎ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಶಿಗ್ಗಾಂವ್ ಕ್ಷೇತ್ರ ದಿಂದ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹಾಗೂ
ಸಂಡೂರಿನಿಂದ ರಾಜ್ಯ ಎಸ್ ಟಿ ಘಟಕದ ಅಧ್ಯಕ್ಷ ಬಂಗಾರು ಹನಮಂತು ಎನ್ಡಿಎ ಅಭ್ಯರ್ಥಿಗಳಾಗಿದ್ದಾರೆ. ಗೊಂದಲದ ಗೂಡಾಗಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ಮೈತ್ರಿ ಪಕ್ಷದಿಂದ ಅಭ್ಯರ್ಥಿ ಅಂತಿಮಗೊಳ್ಳದ ಕಾರಣ ಆಯ್ಕೆ ತಡೆಹಿಡಿದಿದೆ. ಅಭ್ಯರ್ಥಿ ಆಯ್ಕೆಯೇ ಜಟಿಲವಾಗಿರುವುದರಿಂದ ಇನ್ನೂ ಹೈಕಮಾಂಡ್ ಮಟ್ಟದಲ್ಲೇ ಇದ್ದು, ಅಭ್ಯರ್ಥಿ ಅಂತಿಮ ಸಾಧ್ಯತೆ ಸದ್ಯಕ್ಕಿಲ್ಲ.
ಸಂಸದ ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿದ್ದ ಶಿಗ್ಗಾಂವ್ ಕ್ಷೇತ್ರಕ್ಕೆ ಅವರ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದ್ದು, ಶಿಗ್ಗಾಂವ್ ಉಪ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. 2018ರ ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಬಂಗಾರು ಹನುಮಂತು ಉಪಚುನಾವಣೆಗೆ ಸ್ಪರ್ಧಿಸಲಿದ್ದಾರೆ