ಉಡುಪಿ : ನೇಜಾರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ನ.20 ಹಾಗೂ 21ರಂದು ವಿಚಾರಣೆ ನಡೆಯುತ್ತಿರುವ ಉಡುಪಿ ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಲು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ.ಸಮೀವುಲ್ಲ ಆದೇಶಿಸಿದರು.
ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಹಾಜರಾಗಿ, ಆ.30ರಂದು ರಾಜ್ಯ ಉಚ್ಚ ನ್ಯಾಯಾಲಯವು ಪ್ರಕರಣದ ವಿಚಾರಣೆ ನೀಡಿದ್ದ ತಡೆಯಾಜ್ಞೆ ಇದೀಗ ತೆರವಾಗಿದ್ದು, ವಿಚಾರಣೆ ಮುಂದುವರಿಸುವಂತೆ ಕೋರಿದರು. ಅಲ್ಲದೇ ಆರೋಪಿಯ ಗುರುತು ಪತ್ತೆಗಾಗಿ ಆರೋಪಿ ಚೌಗಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅರ್ಜಿ ಸಲ್ಲಿಸಿದರು. ಈ ವಾದವನ್ನು ಆಲಿಸಿದ ನ್ಯಾಯಾಧೀಶರು, ಆರೋಪಿಯನ್ನು ನ.20 ರಂದು ಸೂಕ್ತ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಮಲ್ಪೆ ಪೋಲಿಸ್ ನಿರೀಕ್ಷಕರಿಗೆ ನಿರ್ದೇಶಿಸಿತು. ನ. 20 ರಂದು 1 ಹಾಗೂ 2 ಹಾಗು ನ. 21 ರಂದು 3 ಹಾಗೂ 4 ನೇ ಸಾಕಿಗಾರರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತು. ಗುರುವಾರ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಬೆಂಗಳೂರಿನ ಕಾರಾಗೃಹದಿಂದ ವಿಡಿಯೋ ಕಾನ್ಸರೆನ್ಸ್ ಮೂಲಕ ಹಾಜರು ಪಡಿಸಲಾಯಿತು. ನ.20ರಂದು ಆತನನ್ನು ಖುದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.