ಉಡುಪಿ : ದೇಶದ ಸಂಪತ್ತನ್ನು ಕೆಲವು ರಾಜಕಾರಣಿಗಳು, ಅಧಿಕಾರಿಗಳು ಲೂಟಿಗೈಯುತ್ತಿದ್ದಾರೆ. ಒಂದೊಂದು ಹಗರಣದಲ್ಲಿನ ಸಂಪತ್ತಿನ ಮೌಲ್ಯವೇ ದೇಶದ ಒಟ್ಟು ಬಜೆಟಿನ ಗಾತ್ರಕ್ಕಿಂತ ಹೆಚ್ಚಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು, ಶ್ರೀ ಸುಶೀಂದ್ರತೀರ್ಥರು ಮತ್ತು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥರನ್ನು ಭೇಟಿಯಾಗಿ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಪ್ರಸ್ತುತ ಕಾಲಘಟ್ಟದಲ್ಲಿ ಬಹಳ ಸುಲಭವಾಗಿ ಹಣ ಮಾಡಬಹುದು ಎಂಬ ಕಾರಣಕ್ಕೆ ಯುವ ಸಮುದಾಯವೂ, ರಾಜಕಾರಣಿಗಳಾಗಬೇಕೆಂದು ಅಪೇಕ್ಷೆ ಪಡುವಂಥ ದಯನೀಯ ಸ್ಥಿತಿ ಎದುರಾಗಿದೆ.ಇಂಥ ಗಂಭೀರ, ಪರಿಸ್ಥಿತಿಗಳು ದೇಶದ ಭವಿಷ್ಯವನ್ನು ಮಂಕಾಗಿಸುತ್ತಿವೆ ಎಂದವರು ಅಭಿಪ್ರಾಯಪಟ್ಟರು
ಕೆಲವು ರಾಜ್ಯಗಳಲ್ಲಿನ ಹಗರಣದ ಮೊತ್ತ ಸಾವಿರಾರು ಕೋಟಿಗಳದ್ದಾಗಿದೆ. ಸಂವಿಧಾನ, ಕಾನೂನುಗಳಿಂದಲೂ ಇದರ ನಿಯಂತ್ರಣ ಅಸಾಧ್ಯ ಎಂಬಂತಾಗಿದ್ದು, ರಾಜಕಾರಣಿಗಳು ಕಾಯಿದೆ, ಕಾನೂನು, ಸಂವಿಧಾನಗಳೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಈ ಬೆಳವಣಿಗೆಗಳನ್ನು ನೋಡುವಾಗ ಬಹಳ ಬೇಸರವಾಗುತ್ತದೆ. ಯುವ ಪೀಳಿಗೆಗೆ ದುರಾಸೆಯಿಂದ ದೂರವಿರಲು, ದೇಶಾಭಿಮಾನ ಹಾಗೂ ಮಾನವೀಯತೆಯ ಪಾಠ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದವರು ನುಡಿದರು.