ಉಡುಪಿ : 2023 ರಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದ ಫೋಕ್ಸೋ ಪ್ರಕರಣವನ್ನು ಕೇವಲ 10 ತಿಂಗಳೊಳಗೆ ಇತ್ಯರ್ಥ ಪಡಿಸಿ, ಆರೋಪಿಗೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಲೋ ವಿಶೇಷ ನ್ಯಾಯಾಲಯವು ಆದೇಶಿಸಿದೆ.
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಪೋಕ್ಲೋ ಪ್ರಕರಣ ದಲ್ಲಿ ಶಿವಮೊಗ್ಗ ನಿವಾಸಿ ಶರತ್ (27ವರ್ಷ) ಶಿಕ್ಷೆಗೆ ಗುರಿಯಾದ ಆರೋಪಿ. ಈತ ತನ್ನ ಪತ್ನಿ ಮತ್ತು ಮಕ್ಕಳ ಜೊತೆ ಬ್ರಹ್ಮಾವರ ತಾಲೂಕಿನ ನೊಂದ ಬಾಲಕಿಯ ಮನೆಗೆ 2022ರ ಏಪ್ರಿಲ್ ತಿಂಗಳಲ್ಲಿ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಮದುವೆ ಕಾರ್ಯಕ್ರಮದ ಬಳಿಕವೂ ಆತ ನೊಂದ ಬಾಲಕಿಯ ಮನೆಯಲ್ಲೇ ವಾಸವಾಗಿದ್ದು 2023ರ ನವೆಂಬರ್ನಲ್ಲಿ ತನ್ನ ಪತ್ನಿ ಮಕ್ಕಳೊಂದಿಗೆ ಶಿವಮೊಗ್ಗಕ್ಷೆ ವಾಪಸ್ಸಾಗಿದ್ದ
ಈ ಮಧ್ಯೆ ಆರೋಪಿ ನೊಂದ ಬಾಲಕಿಯ ಮೇಲೆ ದೈಹಿಕ ದೌರ್ಜನ್ಯ ಎಸಗಿ, ಈ ವಿಚಾರ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ ನಂತರ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪರೀಕ್ಷಿಸಿ ದಾಗ ಆಕೆ ಗರ್ಭಿಣಿ ಎಂಬುದು ತಿಳಿದುಬಂತು. ಅದರಂತೆ ಬಾಲಕಿಯನ್ನು ವಿಚಾರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ನೊಂದ ಬಾಲಕಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಆಗಿನ ಪೊಲೀಸ್ ನಿರೀಕ್ಷಕ ಜಯಾನಂದ ಕೆ. ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದರು. ನ್ಯಾಯಾಲಯ ಒಟ್ಟು 36 ಸಾಕ್ಷಿಗಳ ಪೈಕಿ 20 ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷಿ ಮತ್ತು ಡಿಎನ್ಎ ವರದಿಯಲ್ಲಿ ಆರೋಪಿಯು ಬಾಲಕಿಯ ಗರ್ಭಕ್ಕೆ ಕಾರಣವಾಗಿರುವ ಪೂರಕ ಸಾಕ್ಷಿಯನ್ನು ಪರಿಗಣಿಸಿ, ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟರು.
ಅದರಂತೆ ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ 21 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ದಂಡ ಮೊತ್ತದಲ್ಲಿ 15 ಸಾವಿರ ರೂ. ನೊಂದ ಬಾಲಕಿಗೆ ಮತ್ತು 6 ಸಾವಿರ ರೂ. ಸರಕಾರಕ್ಕೆ ಪಾವತಿಸುವಂತೆ ಮತ್ತು ಸರಕಾರದಿಂದ ನೊಂದ ಬಾಲಕಿಗೆ 2 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶ ನೀಡಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು