ಕೋಟೇಶ್ವರ : ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿಯೇ ಸಿಕ್ಕುತ್ತದೆ. ಪ್ರಯತ್ನವನ್ನು ಮಾಡದೇ ಫಲಿತಾಂಶದ ಕಡೆ ಕಣ್ಣು ಹಾಯಿಸುವುದು ತರವಲ್ಲ. ಯಶಸ್ಸು ನಮ್ಮದಾಗಬೇಕಾದರೆ ಸ್ವಪ್ರಯತ್ನ ಅಷ್ಟೇ ಮುಖ್ಯವಾಗಿರುತ್ತದೆ. ಪದವಿ ಶಿಕ್ಷಣದಲ್ಲಿ ಪಠ್ಯದ ವಿಷಯಗಳಲ್ಲಿ ಪರಿಪೂರ್ಣ ಜ್ಞಾನ ಸಂಪಾದನೆಯೊಂದಿಗೆ ನಿರಂತರವಾಗಿ ಅಧ್ಯಯನ ಶೀಲರಾದರೆ ಉದ್ಯೋಗ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ ಎಂದು ಎಸ್.ಬಿ.ಐ. ಉಡುಪಿ ರೀಜಿನಲ್ ಮ್ಯಾನೇಜರ್ ಶೋಭಾಲತಾ ಹೇಳಿದರು.
ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ.ಕಾಲೇಜು ಮತ್ತು ಸ್ನತಕೋತ್ತರ ಅಧ್ಯಯನ ಕೇಂದ್ರ, ಕೋಟೇಶ್ವರ ಇಲ್ಲಿ ತಮ್ಮ ಬ್ಯಾಂಕಿನಿಂದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ ಕೊಡಮಾಡಲಾದ “ಕುಡಿಯುವ ನೀರಿನ ಘಟಕ” ಹಾಗೂ 2023-24ನೇ ಸಾಲಿನ ಕಾಲೇಜು ವಾರ್ಷಿಕ ಸಂಚಿಕ “ಮಹರಂದ”ವನ್ನು ಅನಾವರಣಗೊಳಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕರವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿರುವ ಈ ಕಾಲೇಜಿಗೆ ಎಸ್.ಬಿ.ಐ. ಬ್ಯಾಂಕಿನಿಂದ ದೇಣಿಗೆ ರೂಪದಲ್ಲಿ ಕುಡಿಯುವ ನೀರಿನ ಘಟಕವನ್ನು ಒದಗಿಸಿ ಕೊಟ್ಟದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿ ವಿದ್ಯಾರ್ಥಿಗಳು ಕಾಲೇಜಿನ ಮೂಲಭೂತ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ಸಂಚಾಲಕರಾದ ನಾಗರಾಜ ಯು ಪ್ರಸ್ತಾವಿಕ ನುಡಿಗಳನ್ನಾಡಿದರು. ನವ್ಯ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಪಾನಾಧಿಕಾರಿ ರಾಮರಾಯ ಆಚಾರ್ಯ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಡಾ. ವೆಂಕಟರಾಮ ಭಟ್ ವಂದಿಸಿದರು.
ಕಾಲೇಜು ವಾರ್ಷಿಕ ಸಂಚಿಕೆ “ಮಕರಂದ”ದ ಕುರಿತಾಗಿ ಸಂಪಾದಕರಾದ ಶ್ರೀ ನಾಗರಾಜ ವೈದ್ಯ ಎಂ. ಅಭಿಪ್ರಾಯಗಳನ್ನು ಹಂಚಿಕೊಂಡು, ಸಹಕರಿಸಿದ ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು.