Home » 42.ಸಮಷ್ಟೀ ಹಿತಸಾಧನೆ
 

42.ಸಮಷ್ಟೀ ಹಿತಸಾಧನೆ

by Kundapur Xpress
Spread the love
  1. ಸಮಷ್ಟೀ ಹಿತಸಾಧನೆ

ಸೃಷ್ಟಿಶೀಲ ಸಾಧ್ಯತೆಗಳೆಂದರೆ ಬದುಕಿನ ಯಾವುದೇ ಒಂದು ಆಯಾಮವನ್ನು, ವಿಷಯವನ್ನು ಹೊಸ ದೃಷ್ಟಿಯಿಂದ ನೋಡುವ ಹಾಗೂ ಚಿಂತಿಸುವ ನಮ್ಮೊಳಗಿನ ಸಾಮರ್ಥ್ಯವನ್ನು ನಾವು ಕಂಡುಕೊಳ್ಳುವುದೇ ಆಗಿದೆ. ಬದುಕಿನ ಸಮಸ್ತ ಸುಖ, ಸಂತೋಷ್, ಸಮೃದ್ಧಿ ಇರುವುದು ಸಮಷ್ಟೀ ಹಿತವನ್ನು ಕಾಣುವುದರಲ್ಲಿ. ನಾನು ಮಾತ್ರವೇ ಸುಖಸಂತೋಷದಿಂದ ಬದುಕುವುದು ಮುಖ್ಯವಲ್ಲ; ನನ್ನಂತೆ ಇತರರು ಕೂಡ ನಾನು ಅಪೇಕ್ಷೆ ಪಡುವಷ್ಟೇ ಸುಖಸಂತೋಷವನ್ನು ಪಡೆದು ಬದುಕುವವರಾಗಬೇಕು. ಸಮಷ್ಟೀ ಹಿತಸಾಧನೆಯ ಮನೋಭಾವ ಪ್ರಾಪ್ತವಾಗವುದು ಹೇಗೆ? ನಮ್ಮೊಳಗಿನ ಸ್ವಾರ್ಥ, ಲೋಭ, ಮೋಹ, ಮದ, ಮತ್ಸರಾದಿಗಳನ್ನು ತೊರೆಯಲು ಸಾಧ್ಯವಾದಾಗಲೇ. ನಮ್ಮೊಳಗೆ ಮನೆಮಾಡಿರುವ ಶತ್ರುಗಳನ್ನು ಹೊಡೆದೋಡಿಸುವುದು ಅಷ್ಟು ಸುಲಭವೇ? ಅದಕ್ಕೆ ಬುದ್ಧನು ಬೋಧಿಸಿರುವ ಸತ್ಯ, ಅಹಿಂಸೆ, ತ್ಯಾಗ, ಅಸ್ತೇಯ, ಅಪರಿಗ್ರಹವೇ ಮೊದಲಾದ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವುದು ಅಗತ್ಯ. ಹುಟ್ಟು ಮತ್ತು ಸಾವಿನ ನಡುವಿನ ಜೀವನವೇ ನಮ್ಮ ಪಾಲಿಗೆ ಸರ್ವಸ್ವವಾದಾಗ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ನಮ್ಮನ್ನು ಆಳಲು ತೊಡಗುತ್ತವೆ. ಗೀತೆಯಲ್ಲಿ ಕೃಷ್ಣನು ಸಾರುವಂತೆ ಹುಟ್ಟುವ ಮೊದಲು ನಾವು ಅಗೋಚರವಾಗಿದ್ದೇವು. ಸತ್ತ ಬಳಿಕವೂ ಅಗೋಚರವಾಗುವೆವು. ಎಂದ ಮಾತ್ರಕ್ಕೆ ಹುಟ್ಟುಸಾವಿನ ನಡುವಿನ ಅವಧಿ ಮಾತ್ರವೇ ಸರ್ವಸ್ವವೆಂದು ತಿಳಿಯತಕ್ಕದ್ದಲ್ಲ. ಸಾವು ದೇಹಕ್ಕೆ ಮಾತ್ರವೇ ವಿನಾ ಜೀವಾತ್ಮನಿಗಲ್ಲ. ಮನುಷ್ಯನು ಹಳೆಯ ಬಟ್ಟೆಯನ್ನು ತೆಗೆದುಹಾಕಿ ಹೊಸಬಟ್ಟೆಯನ್ನು ಧರಿಸುವಂತೆ ಜೀವಾತ್ಮನು ಹಳೆಯ ಶರೀರವನ್ನು ಬಿಟ್ಟು ಬೇರೆ ಹೊಸ ಶರೀರದಲ್ಲಿ ಪ್ರವೇಶ ಪಡೆಯುತ್ತಾನೆ. ಇದನ್ನು ತಿಳಿದುಕೊಂಡವನಲ್ಲಿ ಮರಣದ ಭಯ ಉತ್ಪನ್ನವಾಗುವುದಿಲ್ಲ.

   

Related Articles

error: Content is protected !!