Home » ವಕ್ಫ್‌ ಆಸ್ತಿ ನೋಟಿಸ್‌ ತಕ್ಷಣ ಹಿಂಪಡೆಯಲು ಸಿಎಂ ಸೂಚನೆ
 

ವಕ್ಫ್‌ ಆಸ್ತಿ ನೋಟಿಸ್‌ ತಕ್ಷಣ ಹಿಂಪಡೆಯಲು ಸಿಎಂ ಸೂಚನೆ

by Kundapur Xpress
Spread the love

ಬೆಂಗಳೂರು : ರಾಜ್ಯದಲ್ಲಿ ವಕ್ಫ್‌ ಆಸ್ತಿ ಎಂದು ರೈತರಿಗೆ ನೀಡಲಾಗಿರುವ ನೋಟಿಸ್ ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಅಲ್ಲದೆ, ಇನ್ನುಮುಂದೆ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆಯೂ ಅವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ರೈತರ ಆಸ್ತಿಗಳಿಗೆ ವಕ್ಫ್‌ ಆಸ್ತಿ ಒತ್ತುವರಿ ಎಂದು ವಿಜಯಪುರ ಸೇರಿ ವಿವಿಧೆಡೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಇದು ರಾಜಕೀಯವಾಗಿ ವಿವಾದವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ದೀಪಾವಳಿ ದಿನವಾದ ಶನಿವಾರ ಕಂದಾಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್‌ ಮಂಡಳಿಯ ಹಿರಿಯ ಅಧಿಕಾರಿಗಳ ಜತೆ ಸುದೀರ್ಘ ಸಭೆ ನಡೆಸಿದ ಸಿಎಂ, ನೋಟಿಸ್ ನೀಡಿದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ವಕ್ಫ್‌ ಜಮೀನು ವಿಚಾರದಲ್ಲಿ ನಡೆದಿರುವ ಬೆಳವಣಿ ಗೆಗಳನ್ನು ಸರ್ಕಾರ ಯಾವ ಕಾರಣಕ್ಕೂ ಸಹಿಸುವುದಿಲ್ಲ. ಆನಗತ್ಯವಾಗಿ ನೋಟಿಸ್ ನೀಡಿ ಜನರನ್ನು ಆತಂಕಕ್ಕೆ ಗುರಿ ಮಾಡಿದ್ದೀರಿ. ಇದನ್ನೇ ಬಂಡವಾಳ ಮಾಡಿಕೊಂಡು ಜೆಡಿಎಸ್ ಮತ್ತು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿವೆ. ಈ ಮೂಲಕ ರಾಜ್ಯದಲ್ಲಿ ಶಾಂತಿ ಕದಡುವ ದುಷ್ಟ ಪ್ರಯತ್ನವನ್ನು ಆ ಪಕ್ಷಗಳು ಜಂಟಿಯಾಗಿ ಮಾಡುತ್ತಿವೆ. ಇದಕ್ಕೆ ಕಾರಣ ಅಧಿಕಾರಿಗಳ ಬೇಜವಾಬ್ದಾರಿ ಕೆಲಸ ಎಂದು ಕಿಡಿಕಾರಿದರು. ರೈತರ ಸ್ವಾಧೀನದಲ್ಲಿರುವ ಜಮೀನುಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಕಾನೂನು ಬಾಹಿರವಾಗಿ ಹಾಗೂ ನೋಟಿಸ್ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು ಎಂದು ತಾಕೀತು ಮಾಡಿದರು.

   

Related Articles

error: Content is protected !!