ಮುಂಬೈ : ಪುಣೆ ಟೆಸ್ಟ್ ಮೂಲಕ ಭಾರತದ ಟೆಸ್ಟ್ ಭದ್ರಕೋಟೆ ಭೇದಿಸಿದ್ದ ನ್ಯೂಜಿಲೆಂಡ್ ಮುಂಬೈನಲ್ಲಿ ಆ ಕೋಟೆಯನ್ನೇ ನುಚ್ಚುನೂರು ಮಾಡಿದೆ. ತವರಿನಲ್ಲಿ ಈ ವರೆಗೂ ಟೆಸ್ಟ್ ಕ್ರಿಕೆಟ್‌ನ ‘ಹುಲಿ’ ಎಂದೇ ಕರೆಸಿಕೊಳ್ಳುತ್ತಿದ್ದ ಟೀಂ ಇಂಡಿಯಾ, ಐತಿಹಾಸಿಕ ವೈಟ್‌ವಾಶ್‌ಗೆ ತುತ್ತಾಗಿ ‘ಇಲಿ’ ಎಂಬಂತಾಗಿದೆ.”
ವಿದೇಶಿ ತಂಡ ಭಾರತದಲ್ಲಿ ಟೆಸ್ಟ್ ಗೆಲ್ಲಲ್ಲ ಗೆದ್ದರೂ ಸರಣಿ ಗೆಲ್ಲೋಕೆ ಆಗಲ್ಲ ಎಂಬ ಮಾತುಗಳೆಲ್ಲಾ ಈಗ ಸುಳ್ಳಾಗಿದೆ. ಟೆಸ್ಟ್ ಪಂದ್ಯ ಆಯ್ತು, ಸರಣಿ ಹೋಯ್ತು ಈಗ ವೈಟ್‌ವಾಶ್ ಮುಖಭಂಗಕ್ಕೂ ಭಾರತ ತುತ್ತಾಗಿದೆ.
ನ್ಯೂಜಿಲೆಂಡ್ ವಿರುದ್ದ ಭಾನುವಾರ ಕೊನೆಗೊಂಡ 3 ನೇ ಟೆಸ್ಟ್ ಸರಣಿಯಲ್ಲಿ ಭಾರತ 0-3 ಹೀನಾಯ ಸೋಲನುಭವಿಸಿತು. ಸರಣಿಯ ಕೊನೆ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 25 ರನ್ ಗಳಿಂದ ಆಘಾತಕಾರಿ ಸೋಲನುಭವಿಸಿತು.
ಬೆಂಗಳೂರಿನ ಬೌನ್ಸಿ ಪಿಚ್ ಅರ್ಥೈಸಲು ವಿಫಲವಾಗಿದ್ದ ಭಾರತ, ಪುಣೆಯ ಸ್ಪಿನ್ ಪಿಚ್‌ನಲ್ಲಿ ತನ್ನದೇ ಖೆಡ್ಡಾಕ್ಕೆ ಬಿದ್ದಿತ್ತು. ಇನ್ನೇನು ಮುಂಬೈನಲ್ಲಾದರೂ ಮಾನ ಉಳಿಸಿಕೊಳ್ಳಲಿದೆ ಅಂದುಕೊಂಡಿದ್ದರೆ ಅಲ್ಲೂ ಸೋಲು. ಕೇವಲ 147 ರನ್ ಗುರಿ ಬೆನ್ನತ್ತಲೂ ಆಗದೆ ರೋಹಿತ್ ಪಡೆ ಸೋತು ಸುಣ್ಣವಾಗಿದೆ.