ದಾವಣಗೆರೆ : ದೇವಸ್ಥಾನಗಳ ಆಸ್ತಿ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು. ದೇವರ ಹೆಸರಿನಲ್ಲೇ ಅಂತಹ ಆಸ್ತಿಗಳನ್ನು ನೋಂದಣಿ ಮಾಡಿಸಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಮಂಗಳವಾರ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸುವ ಮಾರ್ಗ ಮಧ್ಯೆ ನಗರದ ಶ್ರೀ ಕೃಷ್ಣ ಕಲಾಮಂದಿರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಧಾರ್ಮಿಕ ದತ್ತಿ ಇಲಾಖೆಯಲ್ಲಿರುವ ದೇವಾಲಯ ಹಾಗೂ ದೇವಳದ ಆಸ್ತಿಗಳ ರಕ್ಷಣೆಗೆ ಸರ್ಕಾರ ಮೊದಲು ಮುಂದಾಗಬೇಕು. ದೇವರ ಹೆಸರಿನಲ್ಲಿಯೇ ಆಸ್ತಿಗಳ ನೋಂದಣಿ ಆಗಬೇಕು ಎಂದರು.
ಇದು ನಮ್ಮ ದೇಶ ಭಾರತ ನಮ್ಮದೇ ದೇಶ ಅಂದುಕೊಂಡು ಈವರೆಗೆ ದೇವಾಲಯಗಳ ಆಸ್ತಿಗಳು ದೇವರ ಹೆಸರಿನ ಆಸ್ತಿಯಾಗದೆ ಹಾಗೆಯೇ ಉಳಿದಿವೆ. ಹೀಗಾಗಿ ಅಲ್ಪಸ್ವಲ್ಪ ಪರಭಾರೆಯಾಗುತ್ತಾ ಬಂದಿವೆ. ಈಗ ಎಲ್ಲರಿಗೂ ಜ್ಞಾನೋದಯವಾಗಿದೆ. ಹಾಸನಕ್ಕೆ ಮೊನ್ನೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಅಧಿಕಾರಿಗಳೆಲ್ಲರೂ ದೇವಸ್ಥಾನಗಳ ಆಸ್ತಿಯನ್ನು ದೇವರ ಹೆಸರಿಗೆ ನೋಂದಾಯಿಸುವ ಕೆಲಸ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿತು. ಅಂತಹದ್ದೊಂದು ಮೇಲ್ಪಂಕ್ತಿಯನ್ನು ಹಾಸನ ಜಿಲ್ಲೆಯ ಅಧಿಕಾರಿಗಳು ಹಾಕಿಕೊಟ್ಟಿದ್ದು ಅದೇ ಮಾದರಿಯ ಕೆಲಸ ಎಲ್ಲಾ ಕಡೆ ಆಗಬೇಕು ಎಂದು ಅವರು ಆಶಿಸಿದರು.