ಬೆಂಗಳೂರು : ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ, ರಾಜ್ಯದ ಅಬಕಾರಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮದ್ಯ ಮಾರಾಟಗಾರರು ಇದೀಗ ನ.20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.
ಮತ್ತೊಂದೆಡೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಮದ್ಯ ಮಾರಾಟಗಾರರು ಪಟ್ಟು ಹಿಡಿದಿದ್ದು, ನ.20ರ ಡೆಡ್‌ಲೈನ್ ನೀಡಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಅಧಿಕಾರಿಗಳ ವರ್ಗಾವಣೆಗೆ ಕೋಟ್ಯಂತರ ರು. ಲಂಚ ಪಡೆದಿದ್ದಾರೆ ಎಂದು ರಾಜ್ಯಪಾಲರಿಗೆ ಪ್ರತ್ಯೇಕ ದೂರೊಂದು ಸಲ್ಲಿಕೆಯಾಗಿದೆ. ಉಪ ಚುನಾವಣೆ ಸಮಯದಲ್ಲೇ ಬಂದಿರುವ ಈ ಆರೋಪ ಸರ್ಕಾರಕ್ಕೆ ಇರಿಸುಮುರುಸು ತಂದಿದೆ.