ಮೈಸೂರು: ಮೈಸೂರಿನ ಕೆಸರೆಯ ವಿವಾದಿತ 3.16 ಎಕರೆ ಜಮೀನಿನ ಬದಲಿಗೆ ವಿಜಯನಗರದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಅಕ್ರಮವಾಗಿ ಕೋಟ್ಯಂತರ ರೂ. ಮೌಲ್ಯದ 14 ನಿವೇಶನ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ತನಿಖಾಧಿಕಾರಿಗಳು ಬುಧವಾರ ಸತತ ಎರಡು ಗಂಟೆ ವಿಚಾರಣೆ ನಡೆಸಿದರು.
ತಮ್ಮ 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯನವರು ಗಂಭೀರ ಆರೋಪ ಹೊತ್ತು, ತಮ್ಮ ಅಧೀನ ತನಿಖಾಧಿಕಾರಿಯ ಎದುರು ವಿಚಾರಣೆ ಎದುರಿಸಿದರು. ಈ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ ಲೋಕಾಯುಕ್ತ ಪೊಲೀಸರಿಂದ ವಿಚಾರಣೆ ಎದುರಿಸಿದ ಮೊದಲ ಮುಖ್ಯಮಂತ್ರಿ ಎಂಬ ಪಟ್ಟವೂ ಸಿದ್ದರಾಮಯ್ಯ ಹೆಸರಿನಲ್ಲಿ ದಾಖಲಾಯಿತು.
ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬುಧವಾರ ಖಾಸಗಿ ಕಾರಿನಲ್ಲೇ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯನವರು ಬೆಳಗ್ಗೆ 10.08ರ ವೇಳೆಗೆ ನಗರದ ದಿವಾನ್ಸ್ ರಸ್ತೆಯಲ್ಲಿರುವ ಲೋಕಾಯುಕ್ತ ಎಸ್ಪಿ ಕಚೇರಿಗೆ ಆಗಮಿಸಿ, 10.10ರ ವೇಳೆ ತನಿಖಾಧಿಕಾರಿ ಎದುರು ಪ್ರಕರಣದ ಸಾಮಾನ್ಯ ಆರೋಪಿಯಂತೆ ಕುಳಿತು ವಿಚಾರಣೆ ಎದುರಿಸಿದರು. ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ವಿಚಾರಣೆ ನಡೆಸಿತು.
ಲೋಕಾಯುಕ್ತ ಕಚೇರಿಯಲ್ಲಿ ಯಾವುದೇ ವಿರಾಮ ಇಲ್ಲದೆ ಸತತ 2 ಗಂಟೆ ಕಾಲ ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಲಾಯಿತು. ಮಧ್ಯಾಹ್ನ 12.07ರವರೆಗೆ ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರು, ಸುಮಾರು 30 ರಿಂದ 35 ಪ್ರಶ್ನೆಗಳನ್ನು ಸಿಎಂ ಸಿದ್ದರಾಮಯ್ಯನವರ ಮುಂದಿಟ್ಟು ಉತ್ತರ ಪಡೆದುಕೊಂಡರು.