ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ 900 ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು, ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. ಹಿಂದೆ ಬೆಂಗಳೂರಿನಲ್ಲಿ ರೌಡಿಗಳು ಹಫ್ತಾ ವಸೂಲಿ ಮಾಡುತ್ತಿದ್ದರು. ಈಗ ರೌಡಿಗಳೇ ನಾಚುವಂತೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಾರಕ್ಕೆ 18 ಕೋಟಿ ರು. ವಸೂಲಿ ಮಾಡುತ್ತಿದ್ದಾರೆ ಎಂದೂ ಅವರು ಆಪಾದಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇದು ಹಣದ ಅವ್ಯವಹಾರವಾಗಿರುವುದರಿಂದ ಇ.ಡಿ. ಕೂಡ ಕ್ರಮ ವಹಿಸಬೇಕು ಎಂದರು. ಪ್ರತಿ ಹುದ್ದೆಯ ಅಧಿಕಾರಿಗಳಿಗೆ ಎಷ್ಟು ಲಂಚ ನೀಡಲಾಗುತ್ತಿದೆ ಎಂದು ಮದ್ಯ ಮಾರಾಟಗಾರರ ಸಂಘ ಪತ್ರದಲ್ಲಿ ವಿವರಿಸಿದೆ ಎಂದು ಆರೋಪಿಸಿದರು.