ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಶ್ರೀ ಶ್ರೀನಿವಾಸ ಉತ್ಸವ ಬಳಗ(ರಿ.) ಬೆಂಗಳೂರು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ಸಹಯೋಗದೊಂದಿಗೆ ‘ಶ್ರೀ ವಿಜಯ ದಾಸರ ಆರಾಧನಾ ಮಹೋತ್ಸವ’ದ ಅಂಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರ ಹಾಗೂ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ವಿದ್ವಾಂಸರಾದ ಡಾ! ಬಿ.ಗೋಪಾಲಾಚಾರ್ಯ ಇವರ ಸಂಯೋಜನೆಯಲ್ಲಿ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಮಣಿಪಾಲ ಇವರ ನೇತೃತ್ವದಲ್ಲಿ ‘ಸಹಸ್ರ ಕಂಠ ಗಾಯನ’ ಮತ್ತು ‘ಭಜನಾ ಮಂಡಳಿಗಳ ಸಮಾವೇಶ’ವು ನ.10 ರವಿವಾರ ಮಧ್ಯಾಹ್ನ ಗಂಟೆ 2.00ಕ್ಕೆ ಸರಿಯಾಗಿ ಉಡುಪಿ ಶ್ರೀ ಕೃಷ್ಣ ಮಠದ ‘ರಾಜಾಂಗಣ’ದಲ್ಲಿ ನಡೆಯಲಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ತಿಳಿಸಿದ್ದಾರೆ
ಸಹಸ್ರ ಕಂಠ ಗಾಯನ’ದ ಪೂರ್ವಭಾವಿಯಾಗಿ ವಿದ್ವಾಂಸರಾದ ಡಾ! ಬಿ.ಗೋಪಾಲಾಚಾರ್ಯ ಅವರ ಮಾರ್ಗದರ್ಶನದಲ್ಲಿ ಖ್ಯಾತ ಭಜನಾ ತರಬೇತುದಾರೆ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಮಣಿಪಾಲ ಇವರಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ 4 ದಿನಗಳ ಭಜನಾ ತರಬೇತಿಯಲ್ಲಿ ಸುಮಾರು 600ಕ್ಕೂ ಮಿಕ್ಕಿ ಭಜಕರು ಆಯ್ದ ಭಜನಾ ಹಾಡುಗಳನ್ನು ಅಭ್ಯಾಸ ಮಾಡಿರುವ ಜೊತೆಗೆ ಕುಣಿತದ ಭಜನಾ ತರಬೇತುದಾರರಾದ ಶ್ರೀ ರೋಹಿತ್ ಕಬ್ಯಾಡಿ ಅವರಿಂದ ಕುಣಿತದ ಭಜನೆಯಲ್ಲಿಯೂ ಪರಿಣತಿಯನ್ನು ಹೊಂದಿದ್ದಾರೆ.
ಈಗಾಗಲೇ ಭಜನಾ ತರಬೇತಿ ಪಡೆದ ಸುಮಾರು 800ಕ್ಕೂ ಮಿಕ್ಕಿ ಭಜಕರು ವಿವಿಧ ಭಜನಾ ಮಂಡಳಿಗಳಿಂದ ಹಾಗೂ ವೈಯಕ್ತಿಕವಾಗಿ ‘ಸಹಸ್ರ ಕಂಠ ಗಾಯನ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ತಾಲೂಕಿನ ವಿವಿಧ ಭಜನಾ ಮಂಡಳಿಗಳ ಸುಮಾರು 500ಕ್ಕೂ ಮಿಕ್ಕಿ ಭಜಕರು ಸೇರಿದಂತೆ ಸುಮಾರು 1,000ಕ್ಕೂ ಮಿಕ್ಕಿ ಭಜಕರು ‘ಸಹಸ್ರ ಕಂಠ ಗಾಯನ’ ಹಾಗೂ ‘ಭಜನಾ ಮಂಡಳಿಗಳ ಸಮಾವೇಶ’ದಲ್ಲಿ ಪಾಲ್ಗೊಳ್ಳಲಿದ್ದಾರೆ.
ನ.2ರಂದು ಮಧ್ಯಾಹ್ನ ಗಂಟೆ 12.30ಕ್ಕೆ ಅನ್ನ ಪ್ರಸಾದ ವಿತರಣೆ, ಗಂಟೆ 1.00ಕ್ಕೆ ಭಜನಾ ಮಂಡಳಿಗಳ ನೊಂದಾವಣೆ, 2.00ಕ್ಕೆ ಉದ್ಘಾಟನೆ, 2.30ಕ್ಕೆ ‘ಸಹಸ್ರ ಕಂಠ ಗಾಯನ’ ಹಾಗೂ ಸಂಜೆ 4.00ಕ್ಕೆ ಸಮಾರೋಪ ನಡೆಯಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ