ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎನ್‌ಪಿಟಿಎಲ್ ಸ್ವಯಂ ಕೋರ್ಸಿನ ಮಾಹಿತಿ ಕಾರ‍್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ವಹಿಸಿಕೊಂಡಿದ್ದರು. ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳಿಗೆ ಎನ್‌ಪಿಟಿಎಲ್ ಸ್ವಯಂ ಕೋರ್ಸುಗಳ ಉದ್ದೇಶ ಮತ್ತು ಅದರ ಮೂಲಕ ಕಲಿಕೆಗೆ ಹೇಗೆ ಸಹಾಯವಾಗಬಹುದು ಎಂಬುದರ ಕುರಿತು ವಿವರಿಸಲಾಯಿತು. ಕೋರ್ಸಿಗೆ ನೋಂದಣಿ ಮಾಡಿಕೊಂಡು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ವಿಭಾಗದ ಪ್ರಾಧ್ಯಾಪಕರುಗಳಾದ ಶ್ರೀ ಗಿರಿರಾಜ್ ಭಟ್ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕರಾದ ಶ್ರೀ ಶ್ರೀಕಾಂತ್ ವಂದಿಸಿ, ಮತ್ತು ಶ್ರೀ ಪ್ರಣಾಮ್ ಆರ್. ಕಾರ್ಯಕ್ರಮವನ್ನು ನಿರೂಪಿಸಿದರು.