- ಅಸ್ಮಿತೆಯ ಪ್ರಶ್ನೆ
ನಮ್ಮೆಲ್ಲ ಭಯಗಳಿಗೆ ಮೂಲವಾಗಿರುವ ಸಾವಿನ ಭಯವನ್ನು ಅಷ್ಟು ಸುಲಭದಲ್ಲಿ ತೊಲಗಿಸುವುದು ಸಾಧ್ಯವೇ? ಬದುಕನ್ನು ತೀವ್ರವಾಗಿ ಪ್ರೀತಿಸುವ ನಮಗೆ ಸಾವಿನ ಭಯ ಸಹಜವಾಗಿಯೇ ಬಂದಿದೆ. ಇದಕ್ಕೆ ಮೂಲ ಕಾರಣ ನಾವು ನಮ್ಮ ಅಸ್ತಿತ್ವವನ್ನು ‘ದೇಹ’ ರೂಪದಲ್ಲಷ್ಟೇ ಗುರುತಿಸಿಕೊಂಡಿರುವುದು. ನಾವೆಂದರೆ ನಮಗೆ ಮತ್ತು ಇತರರಿಗೆ ಕಾಣಿಸಿಕೊಳ್ಳುವ ನಮ್ಮ ದೇಹ ಎನ್ನುವಷ್ಟು ಸಂಕುಚಿತ ಪ್ರಜ್ಞೆಯನ್ನುಹ ನಾವು ಪಡೆದಿದ್ದೇವೆ. ಇದು ಅಜ್ಞಾನದ ಸಂಕೇತ. ಇಷ್ಟಕ್ಕೂ ಬದುಕನ್ನು ನಾವು ತೀವ್ರವಾಗಿ ಪ್ರೀತಿಸುತ್ತೇವೆ ಎಂದರೆ ಏನರ್ಥ? ಈ ಭೌತಿಕ ಜಗತ್ತಿನ ಸುಖ-ಸಂತೋಷಗಳನ್ನು, ಸೌಕರ್ಯಗಳನ್ನು ಹಾಗೂ ಐಷಾರಾಮಗಳನ್ನು ಪ್ರೀತಿಸುತ್ತಿದ್ದೇವೆ ಎಂದರ್ಥವಲ್ಲವೇ? ಹೌದು! ನಾವು ಬಯಸುವುದು ದೈಹಿಕ ಸುಖ, ಸಂತೋಷ, ಸೌಕರ್ಯ, ಐಷಾರಾಮಗಳನ್ನೇ. ಆದರೆ ಅವುಗಳು ತಮ್ಮ ಜತೆಗೆ ತರುವ ದುಃಖಗಳನ್ನು ಅಲ್ಲ! ಬದುಕಿನಲ್ಲಿ ಕೇವಲ ಸುಖ-ಸಂತೋಷ ಮಾತ್ರವೇ ಇರುವುದಿಲ್ಲ. ನಮ್ಮ ನಮ್ಮ ಕರ್ಮಾನುಸಾರವಾಗಿ, ನಾವು ಮಾಡಿದ ಒಳಿತು – ಕೆಡುಕುಗಳಿಗೆ ಅನುಗುಣವಾಗಿ, ನಮ್ಮ ಪಾಲಿನ ಸುಖ-ದುಃಖಗಳು ನಿರ್ಣಯವಾಗುತ್ತವೆ. ಒಳಿತು ಮಾಡಿದವರಿಗೆ ಒಳಿತು, ಕೆಡುಕು ಮಾಡಿದವರಿಗೆ ಕೆಡುಕು. ಕೆಡುಕು ಮಾಡುತ್ತಲೇ ಇರುವಾಗ ಬದುಕಿನಲ್ಲಿ ಒಳಿತೇ ಆಗಬೇಕೆಂದು ಬಯಸಿದರೆ ಆದೀತೆ? ನಮ್ಮ ಅಸ್ಮಿತೆ (ಐಡೆಂಟಿಟಿ) ಯನ್ನು ನಾವು ಕೇವಲ ನಮ್ಮ ದೇಹಕ್ಕೆ ಸೀಮಿತಗೊಳಿಸಿದಾಗ ಬದುಕು ಅತ್ಯಂತ ಸ್ವಾರ್ಥ ಪರವಾಗುತ್ತದೆ. ಬದುಕು ಅಜ್ಞಾನದಿಂದ ಕೂಡಿರುತ್ತದೆ. ತಮಸ್ಸಿನಿಂದ ತುಂಬಿರುತ್ತದೆ. ಪರಿಣಾಮವಾಗಿ ಸುಖ-ಸಂತೋಷಗಳು ಮರೀಚಿಕೆಯಾಗುತ್ತವೆ. ಮೈಮನವೆಲ್ಲ ಸಾವಿನ ಭಯದಿಂದ ಕೂಡಿರುತ್ತದೆ.