ಕೋಟ : ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರದಿಂದ ಹೆಜಮಾಡಿ ವರೆಗಿನ ರಸ್ತೆಯ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ರಸ್ತೆಯಲ್ಲಿ ನೂರಾರು ಸಾವುಗಳು ಅಲ್ಲದೆ ಹಲವಾರು ಜನ ಅಂಗವಿಕಲರಾಗಿದ್ದರೂ ಎಚ್ಚೆತ್ತುಕೊಳ್ಳದ ಇಂಗ್ಲೆಂಡ್ ಮೂಲದ ಕೆ.ಕೆ.ಆರ್ ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಸಮರ್ಪಕವಾದ ನಿರ್ವಹಣೆ ಮತ್ತು ಬೇಜವಾಬ್ದಾರಿಯ ಉಡಾಫೆಯ ನಡವಳಿಕೆ ವಿರುದ್ದ ನ. 28 ರಂದು ಗುರುವಾರ ಚಿತ್ರಪಾಡಿ ಗ್ರಾಮದಲ್ಲಿರುವ ಮಾರಿಗುಡಿ ಬಳಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ರಾ.ಹೆ. ಹೋರಾಟ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯಿರಿ ಹೇಳಿದರು.
ಅವರು ಸಾಲಿಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ ಇವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನ. 28ರಂದು ಪೂರ್ವಾಹ್ನ 9.30 ಪ್ರತಿಭಟನೆ ಆರಂಭಗೊಳ್ಳಲಿದ್ದು, ಡೋಲು ಭಾರಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಮತ್ತು ಕೆಕೆಆರ್ ಜಾಗೃತಿಗೊಳಿಸುವುದು ನಮ್ಮ ಗುರಿಯಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ 66ರ ನಿರ್ವಹಣೆ ಮಾಡುವಲ್ಲಿ ಕೆಕೆಆರ್ ಕಂಪೆನಿ ಸಂಪೂರ್ಣ ವಿಫಲಗೊಂಡಿದೆ. ರಸ್ತೆ ಹೊಂಡ ಮುಚ್ಚುವುದು, ದಾರಿದೀಪ ನಿರ್ವಹಣೆ, ಪಾದಚಾರಿ ಮಾರ್ಗದಲ್ಲಿ ದೊಡ್ಡ ಹೊಂಡಗಳು ಎದ್ದು ಸಾರ್ವಜನಿಕರು ನಡೆದಾಡುವುದು ಕೂಡ ಕಷ್ಟವಾಗಿದೆ. ಟೋಲ್ ಗೇಟ್ ನಲ್ಲಿ ದೊಡ್ಡದೊಡ್ಡ ಟ್ರಕ್ ಗಳು ಎಲ್ಲೆಂದರಲ್ಲಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ನಿರ್ವಹಿಸುವ ಕನಿಷ್ಟ ಕೆಲಸವನ್ನು ಮಾಡುತ್ತಿಲ್ಲ. ಕೇವಲ ಹಣ ಸಂಪಾದನೆ ಮಾತ್ರ ಗುರಿಯಾಗಿಸಿಕೊಂಡಿರುವ ಕೆ ಕೆ ಆರ್ ಕಂಪೆನಿ ವಿರುದ್ಧ ಹೋರಾಡುವುದು ಅಗತ್ಯವಾಗಿದೆ ಎಂದು ಅಧ್ಯಕ್ಷ ಶ್ಯಾಮಸುಂದರ್ ನಾಯಿರಿ ಹೇಳಿದರು.
ನಮ್ಮ ಹೋರಾಟದಲ್ಲಿ ವಿವಿಧ ಸಂಘಟನೆಗಳು ಮತ್ತು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ದೊಡ್ಡ ಮಟ್ಟದ ಹೋರಾಟ ನಡೆಸಲಿದ್ದೇವೆ ಎಂದು ಹೆದ್ದಾರಿ ಹೋರಾಟ ಸಮಿತಿ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಹೇಳಿದರು. ಈ ಸಂದರ್ಭ ಹೋರಾಟಗಾರರಾದ ಐರೋಡಿ ವಿಠ್ಠಲ ಪೂಜಾರಿ, ಅಚ್ಯುತ್ ಪೂಜಾರಿ, ಪ್ರಶಾಂತ್ ಶೆಟ್ಟಿ ರಾಜೇಂದ ಸುವರ್ಣ ಇದ್ದರು.